ADVERTISEMENT

ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ?

ಕೆಪಿಎಂಜಿ ಸಂಸ್ಥೆ ನಡೆಸಿದ ಸಮೀಕ್ಷೆ

ಪಿಟಿಐ
Published 30 ಜೂನ್ 2019, 19:45 IST
Last Updated 30 ಜೂನ್ 2019, 19:45 IST
   

ನವದೆಹಲಿ: ಇದೇ ಶುಕ್ರವಾರ ಮಂಡನೆಯಾಗಲಿರುವ ಪ್ರಸಕ್ತ ಹಣಕಾಸು ವರ್ಷದ (2019–20) ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಸದ್ಯದ ₹ 2.5 ಲಕ್ಷದಿಂದ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಕೆಪಿಎಂಜಿ (ಇಂಡಿಯಾ) ಸಂಸ್ಥೆಯು ಬಜೆಟ್‌ ಮುಂಚೆ ನಡೆಸಿರುವ ಈ ಸಮೀಕ್ಷೆಯಲ್ಲಿ, ವಿವಿಧ ಉದ್ದಿಮೆಗಳ 226 ಜನರು ಭಾಗಿಯಾಗಿದ್ದರು. ಶೇ 74ರಷ್ಟು ಜನರು ಐ.ಟಿ ವಿನಾಯ್ತಿ ಮಿತಿ ಏರಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಾರ್ಷಿಕ ₹ 10 ಕೋಟಿಗಳಷ್ಟು ಆದಾಯ ಗಳಿಸುವ ಸಿರಿವಂತರಿಗೆ ಶೇ 40ರಷ್ಟು ತೆರಿಗೆ ವಿಧಿಸುವ ಪ್ರಸ್ತಾವವನ್ನು ಸರ್ಕಾರ ಪರಿಗಣಿಸಬೇಕು ಎಂದು ಶೇ 58ರಷ್ಟು ಜನರು ತಿಳಿಸಿದ್ದಾರೆ. ಪಿತ್ರಾರ್ಜಿತ ಆಸ್ತಿ ಮರಳಿ ಜಾರಿಗೆ ತರಬೇಕು ಎಂಬುದು ಶೇ 13ರಷ್ಟು ಜನರ ಅನಿಸಿಕೆಯಾಗಿದೆ.

ADVERTISEMENT

ಮನೆಗಳ ಖರೀದಿ ಉತ್ತೇಜಿಸಲು, ಸ್ವಂತದ ವಾಸಕ್ಕೆ ಬಳಸುವ ಗೃಹ ಸಾಲದ ಬಡ್ಡಿಗೆ ಸಂಬಂಧಿಸಿದಂತೆ ತೆರಿಗೆ ಕಡಿತದ ಮಿತಿಯನ್ನು ಸದ್ಯದ ₹ 2 ಲಕ್ಷದಿಂದ ಹೆಚ್ಚಿಸಬೇಕು ಎನ್ನುವುದು ಶೇ 65ರಷ್ಟು ಜನರ ಬೇಡಿಕೆಯಾಗಿದೆ.

80 ಸಿ ಸೆಕ್ಷನ್‌ ಅಡಿ ಸದ್ಯಕ್ಕೆ ಇರುವ ₹ 1.50 ಲಕ್ಷದ ವಿನಾಯ್ತಿ ಮಿತಿಯಿಂದ ಗೃಹ ಸಾಲದ ಅಸಲು ಮರುಪಾವತಿಯನ್ನು ಬೇರ್ಪಡಿಸಬೇಕು ಎಂದು ಶೇ 51ರಷ್ಟು ಜನರು ಬಯಸಿದ್ದಾರೆ.

ನೇರ ತೆರಿಗೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮೊದಲ ಬಜೆಟ್‌ನಿಂದ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ ಎನ್ನುವುದು ಶೇ 53ರಷ್ಟು ಜನರ ಅಭಿಪ್ರಾಯವಾಗಿದೆ. ಕಾರ್ಪೊರೇಟ್‌ ತೆರಿಗೆಯನ್ನು ಸದ್ಯದ ಶೇ 25ರಿಂದ ಕಡಿತ ಮಾಡಬಾರದು ಎಂದು ಶೇ 46ರಷ್ಟು ಜನರು ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.