ADVERTISEMENT

ಕಿರು ಹಣಕಾಸು ಸಂಸ್ಥೆಗಳಿಗೆ ‘ಕೋವಿಡ್‌’ ಸವಾಲು: ಆರ್‌ಬಿಐ

ಪಿಟಿಐ
Published 12 ಸೆಪ್ಟೆಂಬರ್ 2020, 16:57 IST
Last Updated 12 ಸೆಪ್ಟೆಂಬರ್ 2020, 16:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೋವಿಡ್‌–19ಯು ಕಿರು ಹಣಕಾಸು ಸಂಸ್ಥೆಗಳಿಗೆ (ಎಂಎಫ್‌ಐ) ಹೊಸ ಸವಾಲುಗಳನ್ನು ನೀಡಿದೆ. ಇದರಿಂದ ‌ಅಲ್ಪಾವಧಿಗೆ ಹಣಕಾಸಿನ ಸಮಸ್ಯೆ ಎದುರಿಸಲಿದ್ದರೂದೀರ್ಘಾವಧಿಯಲ್ಲಿ ಚೇತರಿಸಿಕೊಳ್ಳುವ ಅವಕಾಶವನ್ನೂ ನೀಡಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.

ಕೋವಿಡ್‌–19 ಕಾರಣದಿಂದಾಗಿ ‘ಎಂಎಫ್‌ಐ’ ವಲಯವು ಹಣಕಾಸಿನ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬರಲಿದ್ದು, ಹೆಚ್ಚಿನ ಬಂಡವಾಳ ಸಂಗ್ರಹಿಸಿ ಇಟ್ಟುಕೊಳ್ಳುವ ಅಗತ್ಯವಿದೆ ಎಂದು ಆರ್‌ಬಿಐ ತನ್ನ ತಿಂಗಳ ವರದಿಯಲ್ಲಿ ಪ್ರಕಟಿಸಿದೆ.

ಸಾಲ ವಸೂಲಿ ಮಾಡಲು ಡಿಜಿಟಲ್‌ ಮಾರ್ಗಗಳ ಅಳವಡಿಕೆಯಿಂದ ಈ ವಲಯದ ಕಾರ್ಯಾಚರಣೆ ಇನ್ನಷ್ಟು ಸುಧಾರಿಸಲಿದೆ. ವರ್ಚುವಲ್‌ ಅಥವಾ ದೂರವಾಣಿ ಮೂಲಕ ಸಾಲ ಪಡೆದವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರುವುದರಿಂದ ಸಾಲ ಮರಳಿ ಪಡೆಯಲು ಅನುಕೂಲ ಆಗಲಿದೆ.

ADVERTISEMENT

ಕೋವಿಡ್‌ನಿಂದ ಎದುರಾಗಿರುವ ಅಡೆತಡೆಗಳಿಂದ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಉಂಟಾಗದಂತೆ ತಡೆಯಲು ಹೆಚ್ಚಿನ ಬಂಡವಾಳ ಸಂಗ್ರಹ ಮತ್ತು ನಗದು ನಿರ್ವಹಣೆ ಬಹಳ ಮುಖ್ಯವಾಗಿದೆ. ಲಾಕ್‌ಡೌನ್‌ನಿಂದಾಗಿ ವಾಣಿಜ್ಯ ವಹಿವಾಟು ಮತ್ತು ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದ್ದು, ಕೌಟುಂಬಿಕ ಆದಾಯದಲ್ಲಿಯೂ ಇಳಿಕೆ ಕಂಡಿದೆ ಎಂದು ತಿಳಿಸಿದೆ.

ಎನ್‌ಬಿಎಫ್‌ಸಿ–ಎಂಎಫ್‌ಐಗಳು ಕಡಿಮೆ ಆದಾಯದವರಿಗೆ ಖಾತರಿ ರಹಿತವಾಗಿ ಸಾಲ ನೀಡುತ್ತಿರುವುದು ಅವುಗಳ ಒಟ್ಟಾರೆ ಹಣಕಾಸು ಸ್ಥಿತಿಗೆ ಅಪಾಯ ತಂದೊಡ್ಡಬಹುದಾಗಿದೆ. ಮರುಪಾವತಿ ಪ್ರಮಾಣ ಇಳಿಮುಖವಾಗಿದೆ. ಇದರಿಂದಾಗಿ ಎನ್‌ಬಿಎಫ್‌ಸಿ–ಎಂಎಫ್‌ಐ ಸಾಲ ನೀಡಿಕೆ ಸಾಮರ್ಥ್ಯ ಕಡಿಮೆ ಆಗಬಹುದು. ಪರಿಣಾಮವಾಗಿ ಹೊಸದಾಗಿ ಬಂಡವಾಳ ಸಂಗ್ರಹಿಸಲು ಕಷ್ಟವಾಗಲಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.