ADVERTISEMENT

ಸಿಬ್ಬಂದಿಗೆ ಸಂಬಳ ಪಾವತಿಸಲು ಸಾಧ್ಯವಾಗುತ್ತಿಲ್ಲ: ಬೈಜುಸ್‌ ಸಂಸ್ಥಾಪಕ ರವೀಂದ್ರನ್‌

ಪಿಟಿಐ
Published 2 ಮಾರ್ಚ್ 2024, 16:07 IST
Last Updated 2 ಮಾರ್ಚ್ 2024, 16:07 IST
ರವೀಂದ್ರನ್‌
ರವೀಂದ್ರನ್‌   

ನವದೆಹಲಿ: ಕೆಲವು ಹೂಡಿಕೆದಾರರೊಂದಿಗಿನ ಕಾನೂನು ತಕರಾರಿನಿಂದಾಗಿ ಕಂಪನಿಯು ಉದ್ಯೋಗಿಗಳಿಗೆ ಸಂಬಳವನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಬೈಜುಸ್‌ ಸಂಸ್ಥಾಪಕ ಬೈಜು ರವೀಂದ್ರನ್ ಶನಿವಾರ ಹೇಳಿದ್ದಾರೆ.

ಸಿಬ್ಬಂದಿಗೆ ಬರೆದ ಪತ್ರದಲ್ಲಿ ರವೀಂದ್ರನ್, ‘ಕಳೆದ ತಿಂಗಳು ಕಂಪನಿಯು ಬಂಡವಾಳದ ಕೊರತೆಯನ್ನು ಎದುರಿಸಿತು. ಆದರೆ ಈಗ ನಾವು ಹಣವನ್ನು ಹೊಂದಿದ್ದರೂ ಸಿಬ್ಬಂದಿಗೆ ಸಂಬಳ ನೀಡುವಲ್ಲಿ ವಿಳಂಬವನ್ನು ಆಗಿದೆ’ ಎಂದು ಹೇಳಿದರು.

ಹೊಸದಾಗಿ ಷೇರು ಮಾರಾಟದ ಮೂಲಕ ಸಂಗ್ರಹಿಸಲಾದ ಮೊತ್ತವನ್ನು ಪ್ರಸ್ತುತ ಪ್ರತ್ಯೇಕ ಖಾತೆಯಲ್ಲಿ ಲಾಕ್ ಮಾಡಲಾಗಿದೆ. ಮಾರ್ಚ್ 10ರೊಳಗೆ ಸಂಬಳವನ್ನು ಪಾವತಿಸಲು ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.

ADVERTISEMENT

‘ಹೂಡಿಕೆದಾರರಲ್ಲಿ ಕೆಲವರು ಹೃದಯಹೀನರಂತೆ ವರ್ತಿಸುತ್ತಿದ್ದಾರೆ. ಬೈಜುಸ್‌ನಲ್ಲಿ ಹೂಡಿಕೆಯಿಂದ ಗಣನೀಯ ಲಾಭವನ್ನು ಪಡೆದಿದ್ದರೂ ಸಹ ಈ ಆಯ್ದ ಹೂಡಿಕೆದಾರರು ಇತರರ ಜೀವನ ಮತ್ತು ಜೀವನೋಪಾಯದ ಬಗ್ಗೆ ನಿರ್ದಯರಾಗಿದ್ದಾರೆ’ ಎಂದು ಆರೋಪಿಸಿದರು.

ಇತ್ತೀಚೆಗೆ ಕಂಪನಿಯ ಪ್ರಮುಖ ಹೂಡಿಕೆದಾರರು ಕರೆದಿದ್ದ ಷೇರುದಾರರ ವಿಶೇಷ ಮಹಾಸಭೆಯಲ್ಲಿ ಕಂಪನಿಯ ಸಿಇಒ ಬೈಜು ರವೀಂದ್ರನ್‌ ಹಾಗೂ ಅವರ ಕುಟುಂಬದ ಸದಸ್ಯರನ್ನು ಆಡಳಿತ ಮಂಡಳಿಯಿಂದ ಪದಚ್ಯುತಿಗೊಳಿಸುವಂತೆ ನಿರ್ಣಯ ಅಂಗೀಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.