ADVERTISEMENT

ಮೂಲಸೌಕರ್ಯ ಯೋಜನೆಗಳಿಗೆ ಹಣ ಒದಗಿಸಲು ಡಿಎಫ್‌ಐ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 15:28 IST
Last Updated 16 ಮಾರ್ಚ್ 2021, 15:28 IST
   

ನವದೆಹಲಿ: ಮೂಲಸೌಕರ್ಯ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ‘ಅಭಿವೃದ್ಧಿ ಹಣಕಾಸು ಸಂಸ್ಥೆ’ಯನ್ನು (ಡಿಎಫ್‌ಐ) ಆರಂಭಿಸಲು ಕೇಂದ್ರ ಸಚಿವ ಸಂಪುಟವು ಮಂಗಳವಾರ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕೇಂದ್ರ ಸರ್ಕಾರದ ವತಿಯಿಂದ ಡಿಎಫ್‌ಐಗೆ ₹ 20 ಸಾವಿರ ಕೋಟಿ ಬಂಡವಾಳ ಒದಗಿಸುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಡಿಎಫ್‌ಐ ಆರಂಭಕ್ಕೆ ಅಗತ್ಯವಿರುವ ಮಸೂದೆಯ ಮಂಡನೆಯನ್ನು ನಿರ್ಮಲಾ ಅವರು ಸಂಸತ್ತಿನ ಹಾಲಿ ಅಧಿವೇಶನದಲ್ಲೇ ಮಾಡಲಿದ್ದಾರೆ.

ಆರಂಭಿಕ ಹಂತದಲ್ಲಿ ಈ ಸಂಸ್ಥೆಯು ಕೇಂದ್ರದ ಮಾಲೀಕತ್ವದಲ್ಲಿ ಇರಲಿದೆ. ನಂತರ ಕೇಂದ್ರದ ಷೇರುಪಾಲನ್ನು ಹಂತ ಹಂತವಾಗಿ ಶೇಕಡ 26ಕ್ಕೆ ಇಳಿಸಲಾಗುತ್ತದೆ ಎಂದು ನಿರ್ಮಲಾ ತಿಳಿಸಿದರು. ಡಿಎಫ್‌ಐ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಪಿಂಚಣಿ ಹಾಗೂ ವಿಮಾ ಕಂಪನಿಗಳಿಂದ ಹೂಡಿಕೆಯನ್ನು ಆಕರ್ಷಿಸುವ ಉದ್ದೇಶ ಹೊಂದಿದೆ. ತಾನು ಸಂಗ್ರಹಿಸುವ ಹಣವನ್ನು ಸಂಸ್ಥೆಯು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲಿದೆ.

ADVERTISEMENT

‘ಡಿಎಫ್‌ಐ ಸ್ಥಾಪನೆಯ ನಂತರ ಅದರ ಆಡಳಿತ ಮಂಡಳಿಯು, ಡಿಎಫ್‌ಐ ಜೊತೆ ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಲಿಮಿಟೆಡ್‌ನಂತಹ ಇತರ ಕಂಪನಿಗಳನ್ನು ವಿಲೀನ ಮಾಡಿಕೊಳ್ಳುವ ಅಥವಾ ಬೇರೆ ಕಂಪನಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಿದೆ’ ಎಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ದೇಬಶೀಷ್ ಪಾಂಡಾ ತಿಳಿಸಿದರು.

ವೃತ್ತಿಪರ ಆಡಳಿತ ಮಂಡಳಿಯನ್ನು ಈ ಸಂಸ್ಥೆ ಹೊಂದಲಿದೆ. ಹೊಸ ಶತಮಾನದ ಅಗತ್ಯಗಳಿಗೆ ಸ್ಪಂದಿಸುವ ಸಾಮರ್ಥ್ಯ ಹೊಂದಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ, ಅವರಿಗೆ ಹೆಚ್ಚಿನ ಆಡಳಿತಾವಧಿ ಇರುತ್ತದೆ ಎಂದರು.

ಡಿಎಫ್‌ಐ ಆಡಳಿತ ಮಂಡಳಿಯಲ್ಲಿ ಶೇಕಡ 50ರಷ್ಟು ಜನ ಅಧಿಕಾರಿ ವರ್ಗಕ್ಕೆ ಸೇರಿಲ್ಲದವರು ಇರುತ್ತಾರೆ ಎಂದು ನಿರ್ಮಲಾ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.