ADVERTISEMENT

ಜಿಎಸ್‌ಟಿ: ಹಣಕಾಸು ಸಚಿವರಿಗೆ ಪತ್ರ; ಕಿಶೋರ್ ಕುಮಾರ್ ಕೊಡ್ಗಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 13:51 IST
Last Updated 9 ಸೆಪ್ಟೆಂಬರ್ 2025, 13:51 IST
ಕಿಶೋರ್‌ಕುಮಾರ್ ಕೊಡ್ಗಿ
ಕಿಶೋರ್‌ಕುಮಾರ್ ಕೊಡ್ಗಿ   

ಮಂಗಳೂರು: ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಹೆಚ್ಚಿಸಿರುವುದರಿಂದ ಅಡಿಕೆಯ ಬೇಡಿಕೆ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಕೇಂದ್ರೀಯ ಅಡಿಕೆ ಮತ್ತು ಕೊಕ್ಕೊ ಮಾರುಕಟ್ಟೆ ಹಾಗೂ ಸಂಸ್ಕರಣಾ ಸಹಕಾರ ಸಂಘ (ಕ್ಯಾಂಪ್ಕೊ) ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ಶೇಕಡಾ 95ರಷ್ಟು ಅಡಿಕೆ ಮತ್ತು ಉಳಿದ ಐದು ಶೇಕಡಾ ಲವಂಗ, ಏಲಕ್ಕಿ, ಮೆಂತೆ ಮುಂತಾದ ವಸ್ತುಗಳನ್ನು ಬಳಸಿ ಸಿದ್ಧಗೊಳಿಸುವ ಪಾನ್ ಮಸಾಲವನ್ನು ತಂಬಾಕು ಉತ್ಪನ್ನಗಳ ಸಾಲಿಗೆ ಸೇರಿಸುವುದು ಸರಿಯಲ್ಲ. ಇದರಿಂದ ಅಡಿಕೆಯೂ ಅನಾರೋಗ್ಯಕರ ಎಂದು ಬಿಂಬಿಸಿದಂತಾಗಿದೆ. ಇದು ಅಡಿಕೆ ಮಾರುಕಟ್ಟೆಯಲ್ಲಿ ‘ಅಕ್ರಮ’ಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಈ ಕಾರಣದಿಂದ ಸಚಿವರಿಗೆ ಪತ್ರ ಬರೆದಿದ್ದು ಅದರ ಪ್ರತಿಯನ್ನು ಅಡಿಕೆ ಬೆಳೆಯುವ ಪ್ರದೇಶಗಳ ಸಂಸದರಿಗೂ ರಾಜ್ಯದ ಕೃಷಿ ಸಚಿವರಿಗೂ ಕಳುಹಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕೆಲವು ಶಕ್ತಿಗಳು ಇಲ್ಲಿಯ ವರೆಗೆ ಅಪಪ್ರಚಾರ ಮಾಡುತ್ತಿದ್ದವು. ಜಿಎಸ್‌ಟಿ ಹೆಚ್ಚಿಸಿರುವ ಅನಾರೋಗ್ಯಕರ ಉತ್ಪನ್ನಗಳ ಜೊತೆಯಲ್ಲಿ ಅಡಿಕೆ ಸೇರಿಕೊಂಡರೆ ಆ ಶಕ್ತಿಗಳ ಆರೋಪವನ್ನು ಒಪ್ಪಿಕೊಂಡಂತಾಗುತ್ತದೆ. ಅಡಿಕೆ ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿರುವ ಖಾಸಗಿ ವ್ಯಾಪಾರಿಗಳು ಇದರ ದುರ್ಲಾಭ ಪಡೆಯುವ ಸಾಧ್ಯತೆ ಇದೆ. ‘ಈ ಬಾರಿ ಅತಿವೃಷ್ಟಿಯಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಅಡಿಕೆಯ ಬೇಡಿಕೆ ಕಡಿಮೆ ಮಾಡುವಂಥ ಕ್ರಮದಿಂದ ಸಮಸ್ಯೆ ಉಲ್ಪಣಿಸಲಿದೆ’ ’ ಎಂದು ಕೊಡ್ಗಿ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.