ADVERTISEMENT

ಕೆನರಾ ಬ್ಯಾಂಕ್‌ ನಿವ್ವಳ ಲಾಭ ₹ 299 ಕೋಟಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 17:26 IST
Last Updated 1 ನವೆಂಬರ್ 2018, 17:26 IST
   

ಬೆಂಗಳೂರು: ರಾಷ್ಟ್ರೀಕೃತ ಕೆನರಾ ಬ್ಯಾಂಕ್‌, ಪ್ರಸಕ್ತ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ ₹ 299.54 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 260.18 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಈ ಬಾರಿಯ ಲಾಭದ ಪ್ರಮಾಣ ಶೇ 15ರಷ್ಟು ಹೆಚ್ಚಳಗೊಂಡಿದೆ.

ಈ ತ್ರೈಮಾಸಿಕದಲ್ಲಿನ ಬ್ಯಾಂಕ್‌ನ ಒಟ್ಟಾರೆ ವರಮಾನವು ₹ 12,679 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ₹ 11,994 ಕೋಟಿಗೆ ಹೋಲಿಸಿದರೆ ಶೇ 5.7ರಷ್ಟು ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ವರಮಾನವು ಹಿಂದಿನ ವರ್ಷದ ₹ 2,783 ಕೋಟಿಗೆ ಹೋಲಿಸಿದರೆ ಈ ಬಾರಿ ಶೇ 17.89ರಷ್ಟು ಏರಿಕೆಯಾಗಿ ₹ 3,281 ಕೋಟಿಗಳಷ್ಟಾಗಿದೆ.

ADVERTISEMENT

‘ಬ್ಯಾಂಕ್‌ನ ಒಟ್ಟಾರೆ ವಹಿವಾಟು ಮತ್ತು ಸಾಲ ಮಂಜೂರಾತಿಯು ಹೆಚ್ಚಳಗೊಂಡಿರುವುದರಿಂದ ವರಮಾನ ಮತ್ತು ನಿವ್ವಳ ಲಾಭದಲ್ಲಿ ಏರಿಕೆ ದಾಖಲಾಗಿದೆ’ ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಂ. ವಿ. ರಾವ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬ್ಯಾಂಕ್‌ನ ಜಾಗತಿಕ ವಹಿವಾಟು ಶೇ 12.49ರಷ್ಟು ಏರಿಕೆಯಾಗಿ ₹ 9.61 ಲಕ್ಷ ಕೋಟಿಗೆ ತಲುಪಿದೆ. ಠೇವಣಿಗಳ ಹೆಚ್ಚಳವು ಶೇ 16ರಷ್ಟು ಏರಿಕೆ ಕಂಡಿದೆ’ ಎಂದು ಕಾರ್ಯನಿರ್ವಾಹಕ ನಿರ್ದೇಶಕಿ ಪಿ. ವಿ. ಭಾರತಿ ಹೇಳಿದರು.

‘ಸಾಲ ವಸೂಲಾತಿಯಲ್ಲಿನ ಹೆಚ್ಚಳದ ಫಲವಾಗಿ ಬ್ಯಾಂಕ್‌ನ ನಿವ್ವಳ ಎನ್‌ಪಿಎ ಶೇ 6.54 ಮತ್ತು ಒಟ್ಟು ಎನ್‌ಪಿಎ ಶೇ 10.56ಕ್ಕೆ ಇಳಿದಿದೆ. ಮುಂಬರುವ ದಿನಗಳಲ್ಲಿ ವಹಿವಾಟಿನ ಬೆಳವಣಿಗೆಯಲ್ಲಿ ಸುಸ್ಥಿರತೆ ಸಾಧಿಸಲಾಗುವುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.