ADVERTISEMENT

ಕೆನರಾ ಬ್ಯಾಂಕ್‌ ಲಾಭ ಶೇ 72ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 12:31 IST
Last Updated 25 ಜುಲೈ 2022, 12:31 IST
ಎಲ್‌.ವಿ. ಪ್ರಭಾಕರ್
ಎಲ್‌.ವಿ. ಪ್ರಭಾಕರ್   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 2,022 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 1,177 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದ‌ಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇಕಡ 72ರಷ್ಟು ಹೆಚ್ಚಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ವರಮಾನವು ಉತ್ತಮ ಬೆಳವಣಿಗೆ ಕಂಡಿದ್ದು, ಸುಸ್ತಿ ಸಾಲಗಳ ಪ್ರಮಾಣ ಇಳಿಕೆ ಆಗಿರುವುದೇ ನಿವ್ವಳ ಲಾಭದಲ್ಲಿ ಏರಿಕೆಗೆ ಕಾರಣ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್‌.ವಿ. ಪ್ರಭಾಕರ್‌ ಅವರು ಸೋಮವಾರ ವರ್ಚುವಲ್‌ ಆಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಬ್ಯಾಂಕ್‌ನ ಒಟ್ಟು ವರಮಾನವು ₹ 20,940 ಕೋಟಿಯಿಂದ ₹ 23,351 ಕೋಟಿಗೆ ಏರಿಕೆ ಆಗಿದೆ. ಬಡ್ಡಿ ವರಮಾನವು ಶೇ 8.3ರಷ್ಟು ಹೆಚ್ಚಾಗಿ ₹ 18,176 ಕೋಟಿಗೆ ತಲುಪಿದೆ.

ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಹಿಂದಿನ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇ 8.50ರಷ್ಟು ಇದ್ದಿದ್ದು, ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇ 6.98ಕ್ಕೆ ಇಳಿಕೆ ಆಗಿದೆ. ಮೌಲ್ಯದ ಲೆಕ್ಕದಲ್ಲಿ ₹ 58,215 ಕೋಟಿಯಿಂದ ₹ 54,733 ಕೋಟಿಗೆ ಇಳಿಕೆ ಆಗಿದೆ.

ನಿವ್ವಳ ಎನ್‌ಪಿಎ ಶೇ 3.46ರಿಂದ ಶೇ 2.48ಕ್ಕೆ ಇಳಿಕೆ ಆಗಿದೆ.

ಗೃಹ ಸಾಲ ನೀಡಿಕೆಯು ಶೇ 16.03ರಷ್ಟು ಬೆಳವಣಿಗೆ ಕಂಡಿದ್ದು, ₹ 75,578 ಕೋಟಿಗೆ ತಲುಪಿದೆ. ಠೇವಣಿ ಮೊತ್ತವು ₹ 110.52 ಲಕ್ಷ ಕೋಟಿ ಆಗಿದ್ದು, ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇ 8.49ರಷ್ಟು ಬೆಳವಣಿಗೆ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತ್ರೈಮಾಸಿಕದ ಅಂತ್ಯಕ್ಕೆ ದೇಶದಲ್ಲಿನ ಒಟ್ಟು ಶಾಖೆಗಳ ಸಂಖ್ಯೆ 9,732ಕ್ಕೆ ತಲುಪಿದೆ. ಒಟ್ಟು 10,802 ಎಟಿಎಂಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.