ADVERTISEMENT

Canara Bank: ಕೆನರಾ ಬ್ಯಾಂಕ್‌ಗೆ ₹5,070 ಕೋಟಿ ಲಾಭ

ಪಿಟಿಐ
Published 8 ಮೇ 2025, 16:00 IST
Last Updated 8 ಮೇ 2025, 16:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, 2024–25ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹5,070 ಕೋಟಿ ನಿವ್ವಳ ಲಾಭ ಗಳಿಸಿದೆ. 

2023–24ನೇ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ ₹3,951 ಕೋಟಿ ಲಾಭ ಗಳಿಸಿತ್ತು. ಈ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಶೇ 28ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್‌ ಗುರುವಾರ ತಿಳಿಸಿದೆ.

ಸಾಲ ವಸೂಲಾತಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಬ್ಯಾಂಕ್‌ನಿಂದ ಹೂಡಿಕೆ ಹಾಗೂ ಬಾಹ್ಯ ಬ್ಯಾಂಕಿಂಗ್‌ ಸೇವೆಯ ವರಮಾನದಲ್ಲಿ ಏರಿಕೆಯಾಗಿದೆ. ಇದರಿಂದ ನಿವ್ವಳ ಲಾಭ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ADVERTISEMENT

ಈ ತ್ರೈಮಾಸಿಕದಲ್ಲಿ ಸಾಲ ನೀಡಿಕೆ ಪ್ರಮಾಣದಲ್ಲಿ ಶೇ 11ರಷ್ಟು ಹೆಚ್ಚಳವಾಗಿದೆ. ಇದರ ಹೊರತಾಗಿಯೂ ಬಡ್ಡಿ ವರಮಾನದಲ್ಲಿ ಶೇ 1.44ರಷ್ಟು ಇಳಿಕೆಯಾಗಿದೆ. ಒಟ್ಟು ಬಡ್ಡಿ ವರಮಾನ ₹9,442 ಕೋಟಿ ಗಳಿಸಿದೆ.

ಬಡ್ಡಿಯೇತರ ವರಮಾನ ₹6,351 ಕೋಟಿ ಆಗಿದೆ. ಈ ವರಮಾನ ಸಂಗ್ರಹದಲ್ಲಿ ಒಟ್ಟಾರೆ ಶೇ 21.74ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 3.34ರಿಂದ ಶೇ 2.94ಕ್ಕೆ ತಗ್ಗಿದೆ. 

‘2025–26ನೇ ಆರ್ಥಿಕ ವರ್ಷದಲ್ಲಿ ಸಾಲ ನೀಡಿಕೆಯಲ್ಲಿ ಶೇ 10ರಿಂದ ಶೇ 11ರಷ್ಟು ಬೆಳವಣಿಗೆ ಸಾಧಿಸುವ ಗುರಿ ಹೊಂದಲಾಗಿದೆ. ಠೇವಣಿ ಸಂಗ್ರಹದಲ್ಲಿ ಶೇ 9ರಷ್ಟಕ್ಕೂ ಹೆಚ್ಚು ಗುರಿ ಸಾಧಿಸಲಾಗುವುದು’ ಎಂದು ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸತ್ಯನಾರಾಯಣ ರಾಜು ತಿಳಿಸಿದ್ದಾರೆ.

ಬ್ಯಾಂಕ್‌ನ ನಿವ್ವಳ ಬಡ್ಡಿ ಲಾಭವನ್ನು (ಎನ್‌ಐಎಂ) ಶೇ 2.75ರಿಂದ ಶೇ 2.80ರ ನಡುವೆ ಕಾಯ್ದುಕೊಳ್ಳಲು ತೀರ್ಮಾನಿಸಲಾಗಿದೆ. ಜಿಎನ್‌‍ಪಿಎ ಅನ್ನು ಶೇ 2.50ಕ್ಕೆ ತಗ್ಗಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.