ADVERTISEMENT

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ಗೆ ₹4,774 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 14:16 IST
Last Updated 30 ಅಕ್ಟೋಬರ್ 2025, 14:16 IST
ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್   

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ ನಿವ್ವಳ ಲಾಭ ಶೇಕಡ 19ರಷ್ಟು ಹೆಚ್ಚಳವಾಗಿದೆ.

ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹4,015 ಕೋಟಿ ಲಾಭ ಗಳಿಸಿತ್ತು. ಈ ಬಾರಿ ₹4,774 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಅವಧಿಯಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಇಳಿಕೆ ಆಗಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆ. ಸತ್ಯನಾರಾಯಣ ರಾಜು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಒಟ್ಟು ವರಮಾನವು ₹38,598 ಕೋಟಿಗೆ ಹೆಚ್ಚಳವಾಗಿದೆ. ಬಡ್ಡಿ ವರಮಾನವು ₹31,544 ಕೋಟಿಯಷ್ಟಾಗಿದೆ. ಅನುತ್ಪಾದಕ ಸಾಲದ ಪ್ರಮಾಣ (ಎನ್‌ಪಿಎ) ಶೇ 3.73ರಿಂದ ಶೇ 2.35ಕ್ಕೆ ಇಳಿದಿದೆ. ನಿವ್ವಳ ಎನ್‌ಪಿಎ ಶೇ 0.98ರಿಂದ ಶೇ 0.54ಕ್ಕೆ ಕಡಿಮೆ ಆಗಿದೆ.

ADVERTISEMENT

ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅನುತ್ಪಾದಕ ಸಾಲದ ಪ್ರಮಾಣ ₹2,587 ಕೋಟಿಯಷ್ಟಿತ್ತು. ಅದು ಪ್ರಸಕ್ತ ಸೆಪ್ಟೆಂಬರ್ ವೇಳೆಗೆ ₹1,504 ಕೋಟಿಗೆ ಇಳಿದಿದೆ. 

ಬ್ಯಾಂಕ್‌ನ ಒಟ್ಟು ವ್ಯವಹಾರವು ಶೇ 13.5ರಷ್ಟು ಹೆಚ್ಚಳವಾಗಿದ್ದು, ₹26,78,963 ಕೋಟಿಯಾಗಿದೆ. ಠೇವಣಿ ₹15,27,922 ಕೋಟಿಯಷ್ಟಾಗಿದ್ದು, ಬ್ಯಾಂಕ್‌ ₹11,51,041 ಕೋಟಿ ಸಾಲ ನೀಡಿದೆ. ಕಳೆದ ಸೆಪ್ಟೆಂಬರ್‌ ತ್ರೈಮಾಸಿಕಕ್ಕೆ ಹೋಲಿಸಿದರೆ ಸಾಲ ನೀಡಿಕೆಯಲ್ಲಿ ಶೇ 13.7ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.

ಜಿಎಸ್‌ಟಿ ಇಳಿಕೆಯಿಂದ ಸಾಲ ತೆಗೆದುಕೊಳ್ಳುತ್ತಿರುವವರ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಪ್ರಮುಖವಾಗಿ ವಾಹನ ಖರೀದಿಸಲು ಸಾಲ ಪಡೆಯುವವರು ಹೆಚ್ಚಾಗಿದ್ದಾರೆ. ಮುಂದಿನ ತ್ರೈಮಾಸಿಕಗಳಲ್ಲಿ ಈ ಹೆಚ್ಚಳದ ಸ್ಪಷ್ಟತೆ ಸಿಗಲಿದೆ ಎಂದರು.

ಅದೇ ದಿನ ಚೆಕ್ ಕ್ಲಿಯರೆನ್ಸ್‌ ಮಾಡುವ ವ್ಯವಸ್ಥೆಯಲ್ಲಿ ಆರಂಭದ ಕೆಲ ದಿನ ಮಾತ್ರ ಸಮಸ್ಯೆ ಉಂಟಾಗಿತ್ತು. ಈಗ ಸರಿಯಾಗಿದೆ. ನವೆಂಬರ್‌ ತಿಂಗಳಿನಲ್ಲಿ ಬ್ಯಾಂಕ್‌ನ ಸಂಸ್ಥಾಪನಾ ದಿನಾಚರಣೆ ನಡೆಯಲಿದೆ. ಈ ವೇಳೆ ಬ್ಯಾಂಕ್‌ ತನ್ನ 10 ಸಾವಿರನೇ ಶಾಖೆಯನ್ನು ಆರಂಭಿಸಲಿದೆ ಎಂದು ಹೇಳಿದರು.