ADVERTISEMENT

ಬೆಳೆಗಾರರಿಗೆ ವರದಾನವಾದ ಕಬ್ಬು ಕಟಾವು ಯಂತ್ರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 19:30 IST
Last Updated 23 ಅಕ್ಟೋಬರ್ 2018, 19:30 IST
ಕಬ್ಬು ಕಟಾವು ಯಂತ್ರ
ಕಬ್ಬು ಕಟಾವು ಯಂತ್ರ   

ದೇಶಿ ಕೃಷಿ ರಂಗವು ಅಸಂಖ್ಯ ದುಡಿಯುವ ಕೈಗಳಿಗೆ ಕೆಲಸ ಒದಗಿಸಿದೆ. ಆದರೆ, ಅನೇಕ ಕಾರಣಗಳಿಂದ ಕೃಷಿಯಲ್ಲಿ ತೊಡಗುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಕಳವಳಕಾರಿಯಾದ ವಿದ್ಯಮಾನವಾಗಿದೆ. ಕಾರ್ಮಿಕರ ಕೊರತೆಯುಂಟಾಗಿ ಕೃಷಿ ಕ್ಷೇತ್ರದ ಪ್ರಗತಿ ಮೇಲೆ ಪ್ರತಿಕೂಲ ಪರಿಣಾಮ ಕಂಡು ಬರುತ್ತಿದೆ.

ಈ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಗಾಗಿ ಹಲವಾರು ಕಂಪನಿಗಳು ಸುಸಜ್ಜಿತ ನಮೂನೆಯ ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅವುಗಳ ಪೈಕಿ ಕಬ್ಬು ಕಟಾವು ಯಂತ್ರವೂ ಒಂದು. ಹಲವಾರು ಕಂಪನಿಗಳು ಇದನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದರಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚಿನ ಪ್ರಯೋಜನ ಲಭಿಸುತ್ತಿದೆ.

ಕಬ್ಬು ಕಟಾವು ಮಾಡುವ ಕಾರ್ಮಿಕರ ಕೊರತೆಯಿಂದಾಗಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಈ ಕಬ್ಬು ಕಟಾವು ಯಂತ್ರಗಳ ಸಂಶೋಧನೆಯು ಬಿಕ್ಕಟ್ಟು ನಿವಾರಿಸಲು ನೆರವಾಗುತ್ತಿದೆ. ಸದ್ಯಕ್ಕೆ ಲಭ್ಯ ಇರುವ ಈ ಕಬ್ಬು ಕಟಾವು ಯಂತ್ರಗಳು ಸ್ಥಳೀಯ ಬಳಕೆಗೆ ಅಷ್ಟೊಂದು ಹೊಂದಾಣಿಕೆಯಾಗದಿದ್ದರೂ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳು ಇವುಗಳ ಬಳಕೆಗೆ ಮುಂದಾಗಬೇಕಾಗಿದೆ. ಈ ಯಂತ್ರಗಳಿಂದ ಸ್ವಲ್ಪ ಪ್ರಮಾಣದ ಹಾನಿಯುಂಟಾದರೂ ಲಾಭದ ಪ್ರಮಾಣವೇ ಹೆಚ್ಚು ಎಂದು ಹೇಳಬಹುದು.

ADVERTISEMENT

ಪ್ರಯೋಜನಗಳು

* ತಾಜಾ ಕಬ್ಬು ತ್ವರಿತವಾಗಿ ಕಾರ್ಖಾನೆಗೆ ಪೂರೈಕೆಯಾಗುತ್ತದೆ. ತಾಜಾ ಕಬ್ಬಿನ ಪೂರೈಕೆಯಿಂದ ಸಕ್ಕರೆ ಹೆಚ್ಚು ಉತ್ಪಾದನೆಯಾಗುತ್ತದೆ.

* ಕಬ್ಬಿನ ಜೊತೆಯಿರುವ ಒಣ ಮತ್ತು ಹಸಿ ರವದಿಯು ಸಣ್ಣ-ಸಣ್ಣ ತುಂಡುಗಳಾಗಿ ಮರಳಿ ಭೂಮಿಗೆ ಸೇರ್ಪಡೆಯಾಗಿ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

* ದೊಡ್ಡ ಪ್ರಮಾಣದ ಕೃಷಿ ಕಾರ್ಮಿಕರ ಕೊರತೆ ಸಮಸ್ಯೆ ದೂರ

* ಕುಳೆ ಕಬ್ಬು ಕಾಯುವ ರೈತರಿಗೆ ಕೋಲಿ (ಕಟಾವಾಗದೆ ಉಳಿದ ಕಬ್ಬು) ಸವರುವಿಕೆ ಕಾರ್ಯದಿಂದ ಮುಕ್ತಿಜಮೀನಿಗೆ ಸಮಾನಾಂತರವಾಗಿ ಕಬ್ಬು ಕಟಾವು ಮಾಡುವುದರಿಂದ ಯಾವುದೇ ರೀತಿಯ ಕಬ್ಬು(ಕೋಲಿ) ಉಳಿಯುವುದಿಲ್ಲ.

* ರಾತ್ರಿ ಸಮಯದಲ್ಲಿಯೂ ಉತ್ತಮ ಬೆಳಕಿನ ಸಹಾಯದಿಂದ ಕಟಾವು ಮಾಡಬಹುದು.

* ಕಟಾವು ಮಾಡಿದ ಕಬ್ಬನ್ನು ಸ್ವಲ್ಪ-ಸ್ವಲ್ಪ ಪ್ರಮಾಣದಲ್ಲಿ ಮಾತ್ರ ತಾಕುಗಳಿಂದ ಹೊರಗೆ ತೆಗೆದುಕೊಂಡು ಹೋಗಿ ದೊಡ್ಡ ವಾಹನಗಳಿಗೆ ತುಂಬಿ ಕಾರ್ಖಾನೆಗೆ ಕಳುಹಿಸಲಾಗುತ್ತದೆ. ಇದರಿಂದ ಕಬ್ಬು ಕಟಾವು ಮಾಡುತ್ತಿರುವ ತಾಕುಗಳಲ್ಲಿನ ಕಬ್ಬಿನ ಗದ್ದೆಗಳಿಗೆ ತೊಂದರೆ ಕಡಿಮೆ

* ಕಬ್ಬು ಕಟಾವಾಗುವಾಗ ತುಂಡು-ತುಂಡಾಗಿ ಕಾರ್ಖಾನೆಗೆ ಪೂರೈಕೆಯಾಗುವುದರಿಂದ ಯಂತ್ರಗಳ ಮೇಲಿನ ಒತ್ತಡ ಕಡಿಮೆಯಾಗುವುದು. ಕಡಿಮೆ ವಿದ್ಯುತ್ ಬಳಕೆಯಾಗುತ್ತದೆ.

* ಯಂತ್ರಗಳ ಖರೀದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾಗಳಿಂದ ಸಹಾಯಧನದ ನೆರವು ದೊರೆಯಲಿದೆ.

* ಅವಶ್ಯವಿರುವ ತಳಿಯ ಕಬ್ಬನ್ನು ಕಾರ್ಖಾನೆಯ ಅಗತ್ಯಕ್ಕನುಗುಣವಾಗಿ ಕಟಾವು ಮಾಡಬಹುದು.

ಯಂತ್ರಗಳ ತಯಾರಕರು ಭವಿಷ್ಯದಲ್ಲಿ ಈ ಕೆಳಗಿನಂತೆ ಮಾರ್ಪಾಟು ಮಾಡುವ ಅಗತ್ಯವೂ ಇದೆ.

* ಯಂತ್ರದ ಭಾರ ಕಡಿಮೆಗೊಳಿಸುವುದು.

* ಟಾವಾದ ಕಬ್ಬನ್ನು ಬಹಳಷ್ಟು ಸಣ್ಣ-ಸಣ್ಣ ತುಂಡುಗಳನ್ನಾಗಿ ಮಾಡದೇ, ಒಂದು ಅಖಂಡ ಕಬ್ಬಿನಲ್ಲಿ ಕೇವಲ ಎರಡರಿಂದ ಮೂರು ತುಂಡುಗಳನ್ನಾಗಿ ಮಾಡುವುದು. ಇದರಿಂದ ಕಬ್ಬಿನಲ್ಲಿನ ರಸ ಹೊರ ಹೋಗುವಿಕೆಯತಡೆಗಟ್ಟಬಹುದಾಗಿದೆ.

* ಕಟಾವಾದ ಕಬ್ಬಿನೊಂದಿಗೆ ಒಣಗಿದ ರವದೆಯು ಕಾರ್ಖಾನೆಗೆ ಪೂರೈಕೆಯಾಗುವುದು ನಿಲ್ಲಬೇಕು.

* ಕಟಾವಾದ ಕಬ್ಬಿನೊಂದಿಗೆ ಹಸಿರು ಎಲೆ ಮತ್ತು ಹಸಿರು ತುದಿಯು ಕಾರ್ಖಾನೆಗೆ ಪೂರೈಕೆಯಾಗುವುದು ನಿಲ್ಲಬೇಕು. ಈ ಹಸಿರು ಎಲೆ ಮತ್ತು ಹಸಿರು ತುದಿಯಲ್ಲಿನ ರಸವು ಕಬ್ಬಿನ ರಸದೊಂದಿಗೆ ಮಿಶ್ರಣವಾಗುತ್ತದೆ. ಇದರಿಂದಗುಣಮಟ್ಟದ ಸಕ್ಕರೆ ಉತ್ಪಾದನೆಯಾಗುವುದಿಲ್ಲ.

* ಕಬ್ಬು ಯಂತ್ರದ ಚಾಲನೆಯನ್ನು ಸರಳೀಕರಣಗೊಳಿಸಬೇಕು.

* ಯಂತ್ರದ ಗುಣಮಟ್ಟದ ಬಿಡಿ-ಭಾಗಗಳು ಕಡಿಮೆ ದರದಲ್ಲಿ ಸುಲಭವಾಗಿ ದೊರೆಯುವಂತೆ ಮಾಡುವುದು.

* ಚಿಕ್ಕ-ಚಿಕ್ಕ ಕಬ್ಬಿನ ತಾಕುಗಳನ್ನೂ ಸಹ ಸರಳವಾಗಿ ಕಟಾವಾಗುವಂತೆ ಮಾರ್ಪಾಟುಗೊಳಿಸುವುದು.

ಬೆಳೆಗಾರರ ಹಾಗು ಕಾರ್ಖಾನೆಗಳ ಹಿತದೃಷ್ಟಿಯಿಂದ ಸರ್ಕಾರಗಳು ಕೆಲ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ. ಸಹಾಯಧನದ ಪ್ರಮಾಣ ಹೆಚ್ಚಿಸುವುದು. ಯಂತ್ರಗಳ ಖರೀದಿಯನ್ನು ಕೇವಲ ಸಕ್ಕರೆ ಕಾರ್ಖಾನೆಗಳಿಗೆ ಮಾತ್ರ ಸೀಮಿತಗೊಳಿಸಿ ರೈತರ ಮೇಲಿನ ಆರ್ಥಿಕ ಹೊರೆ ತಗ್ಗಿಸಬೇಕು.

ಕಟಾವು ಮಾಡಿದ ಕಬ್ಬಿನೊಂದಿಗೆಒಣ ರವದೆ, ಹಸಿರು ಎಲೆ, ಹಸಿರು ತುದಿ, ಮಣ್ಣು, ಬೇರು ಮತ್ತು ಕಸ ಕಾರ್ಖಾನೆಗಳಿಗೆ ಪೂರೈಕೆಯಾಗುವುದನ್ನು ತಪ್ಪಿಸಬೇಕು. ಕಬ್ಬಿನ ನಿವ್ವಳ ತೂಕದಲ್ಲಿ ತ್ಯಾಜ್ಯ ಕಡಿತಗೊಳಿಸಲು ಕಾರ್ಖಾನೆಗಳಿಗೆ ಪರವಾನಗಿ ನೀಡಬೇಕು. ಯಂತ್ರದ ಖರೀದಿಯ ಸಮಯದಲ್ಲಿಯೇ ಸಹಾಯಧನ ಮಂಜೂರಾಗುವಂತೆ ಕ್ರಮ ಕೈಕೊಳ್ಳಬೇಕು.

ಸಹಾಯಧನದ ಮಂಜೂರಾತಿ ಸರಳೀಕರಣಗೊಳಿಸಬೇಕು. ಸಹಾಯಧನವನ್ನು ಯಂತ್ರಗಳ ತಯಾರಕರಿಗೆ ನೀಡುವ ವ್ಯವಸ್ಥೆ ಜಾರಿಯಾಗಬೇಕು. ಯಂತ್ರಗಳ ಮಾರಾಟಗಾರರು ಸಹಾಯಧನ ಕಡಿತಗೊಳಿಸಿಯೇ ಮಾರಾಟ ಮಾಡುವ ವ್ಯವಸ್ಥೆ ಜಾರಿಯಾಗಬೇಕು.

‘ಈ ಯಂತ್ರಗಳ ವಿನ್ಯಾಸದಲ್ಲಿ ಇನ್ನೂ ಬದಲಾವಣೆಯಾಗಿ ಕೇವಲ ಸ್ವಚ್ಛವಾದ ಕಬ್ಬು ಮಾತ್ರ ಕಾರ್ಖಾನೆಗೆ ಪೂರೈಕೆಯಾಗುವಂತೆ ಮಾರ್ಪಾಟು ಮಾಡುವ ಅಗತ್ಯ ಇದೆ’ ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಉಪಾಧ್ಯಕ್ಷ ಜಗದೀಶ ಗುಡಗುಂಟಿ ಅವರು ಹೇಳುತ್ತಾರೆ.

‘ರಾಜ್ಯದಲ್ಲಿ ಮೊದಲ ಬಾರಿಗೆ ಏಳು ಕಬ್ಬು ಕಟಾವು ಯಂತ್ರಗಳನ್ನು ಖರೀದಿಸಿದ ಶ್ರೇಯಸ್ಸು ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಗೆ ಸಲ್ಲುತ್ತದೆ’ ಎಂಬುದು ಕೃಷ್ಣಾ ಮೇಲ್ದಂಡೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ (ಯಡಹಳ್ಳಿ) ಅವರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.