ನವದೆಹಲಿ : 2024–25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ ಸಿಮೆಂಟ್ ಬೆಲೆಯು ಶೇ 7ರಷ್ಟು ಇಳಿಕೆಯಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಸಂಸ್ಥೆಯ ವರದಿ ತಿಳಿಸಿದೆ.
ಮಾರುಕಟ್ಟೆಯಲ್ಲಿ ಸಿಮೆಂಟ್‌ಗೆ ಬೇಡಿಕೆ ತಗ್ಗಿದೆ. ಮತ್ತೊಂದೆಡೆ ಪ್ರಮುಖ ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಪೂರೈಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದ ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ. ಆದರೆ, ಕಂಪನಿಗಳು ಹೆಚ್ಚುವರಿಯಾಗಿ ಸಿಮೆಂಟ್ ತಯಾರಿಕಾ ಘಟಕಗಳನ್ನು ಸ್ಥಾಪಿಸುತ್ತಿವೆ. ಇದು ಒಟ್ಟಾರೆ ದರದಲ್ಲಿ ಇಳಿಕೆಗೂ ಕಾರಣವಾಗಬಹುದು ಎಂದು ಹೇಳಿದೆ.
ಈ ವಲಯದಲ್ಲಿ ಪ್ರಮುಖ ಕಂಪನಿಗಳಿಂದ ಸಣ್ಣ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಅಲ್ಟ್ರಾಟೆಕ್ ಸಿಮೆಂಟ್, ಅದಾನಿ ಸಿಮೆಂಟ್, ಶ್ರೀ ಸಿಮೆಂಟ್, ದಾಲ್ಮಿಯಾ ಸಿಮೆಂಟ್ ತಮ್ಮ ವ್ಯವಹಾರ ವಿಸ್ತರಿಸಲು ಮುಂದಾಗಿವೆ. ಇದರ ಭಾಗವಾಗಿ ಸಣ್ಣ ಕಂಪನಿಗಳನ್ನು ಖರೀದಿಸುತ್ತಿವೆ ಎಂದು ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಈ ವಲಯದ ಬೆಳವಣಿಗೆಯು ಶೇ 2ರಿಂದ ಶೇ 3ರಷ್ಟು ಇಳಿಕೆಯಾಗಿದೆ. ಆದರೆ, ಮೂರನೇ ತ್ರೈಮಾಸಿಕದಲ್ಲಿ ಅಲ್ಪಮಟ್ಟಿಗೆ ಏರಿಕೆ ಕಂಡಿದೆ ಎಂದು ಹೇಳಿದೆ.
ಕಳೆದ ವರ್ಷದ ನವೆಂಬರ್‌ನಿಂದ ದೇಶದಲ್ಲಿ ನಿರ್ಮಾಣ ಚಟುವಟಿಕೆಗಳು ಗರಿಗೆದರಿವೆ. ಉತ್ತಮ ಮುಂಗಾರು ನಿರೀಕ್ಷೆ ಹಾಗೂ ಹಬ್ಬದ ಋತುವಿನ ಆರಂಭವು ಇದಕ್ಕೆ ನೆರವಾಗಿದೆ. ದೇಶದ ಪೂರ್ವ ಭಾಗದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ರಾಜ್ಯಗಳಲ್ಲಿ ನಿರ್ಮಾಣ ಚಟುವಟಿಕೆಗಳು ಉತ್ತಮವಾಗಿವೆ ಎಂದು ಹೇಳಿದೆ.
ಆದರೆ, ಮಾರುಕಟ್ಟೆಯ ಪಾಲು ಹೆಚ್ಚಿಸಿಕೊಳ್ಳಲು ಪ್ರಮುಖ ಕಂಪನಿಗಳ ನಡುವೆ ಪೈಪೋಟಿ ನಡೆದಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಕಂಪನಿಗಳ ಸ್ವಾಧೀನ ಪ್ರಕ್ರಿಯೆ ಮುಂದುವರಿಯಲಿದೆ. ಮತ್ತೊಂದೆಡೆ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಬೆಳವಣಿಗೆಯು ಇಳಿಕೆ ಕಂಡಿದೆ. ಹಾಗಾಗಿ, ನಾಲ್ಕನೇ ತ್ರೈಮಾಸಿಕದಲ್ಲಿ ಬೆಲೆ ಏರಿಕೆಯಾದರೂ ಒಟ್ಟಾರೆ ವಾರ್ಷಿಕ ಬೆಳವಣಿಗೆಯು ಒಂದು ದಶಕದ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.