
ಗೋಧಿ
ನವದೆಹಲಿ (ಪಿಟಿಐ): 25 ಲಕ್ಷ ಟನ್‌ನಷ್ಟು ಗೋಧಿ ರಫ್ತು ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಇದೇ ವೇಳೆ ಹೆಚ್ಚುವರಿಯಾಗಿ 5 ಲಕ್ಷ ಟನ್ ಸಕ್ಕರೆ ರಫ್ತಿಗೂ ಸಹ ಒಪ್ಪಿಗೆ ನೀಡಿದೆ.
ಪ್ರಸ್ತುತ ಲಭ್ಯತೆ ಇರುವ ದಾಸ್ತಾನು ಮತ್ತು ಬೆಲೆಯ ಸನ್ನಿವೇಶವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಕೇಂದ್ರ ಆಹಾರ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಈಗ ಅಂದಾಜು 75 ಲಕ್ಷ ಟನ್ ಗೋಧಿ ದಾಸ್ತಾನು ಇದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 32 ಲಕ್ಷ ಟನ್‌ಗೂ ಅಧಿಕ ಎಂದು ತಿಳಿಸಿದೆ.
2026ರ ಏಪ್ರಿಲ್ 1ರ ವೇಳೆಗೆ ಭಾರತೀಯ ಆಹಾರ ನಿಗಮದಲ್ಲಿ (ಎಫ್‌ಸಿಐ) ಅಂದಾಜು 182 ಲಕ್ಷ ಟನ್ ಗೋಧಿ ಲಭ್ಯವಾಗುವ ನಿರೀಕ್ಷೆ ಇದೆ. ಹೀಗಾಗಿ, ರಫ್ತು ಅನುಮತಿ ದೇಶದ ಆಹಾರದ ಅಗತ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.
ಕಳೆದ ವರ್ಷದ ಹಿಂಗಾರು ಹಂಗಾಮಿನಲ್ಲಿ ದೇಶದಲ್ಲಿ 328 ಲಕ್ಷ ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆ ಆಗಿತ್ತು. ಅದು ಈ ಬಾರಿ 334 ಲಕ್ಷ ಹೆಕ್ಟೇರ್‌ಗೆ ಹೆಚ್ಚಳವಾಗಿದೆ. ಇದು ಗೋಧಿ ಕೃಷಿಯಲ್ಲಿ ಹೆಚ್ಚುತ್ತಿರುವ ರೈತರ ದೃಢವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
ಹೆಚ್ಚಿನ ಗೋಧಿ ಲಭ್ಯತೆ, ಬೆಲೆ ಇಳಿಕೆ, ಉತ್ಪಾದನೆ ಹೆಚ್ಚುವ ನಿರೀಕ್ಷೆ ಮತ್ತು ಮಾರಾಟದ ಸಮಯದಲ್ಲಿ ಉಂಟಾಗುವ ತೊಂದರೆಯನ್ನು ತಡೆಯಲು ಸರ್ಕಾರವು ರಫ್ತು ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರದ ನಿರ್ಧಾರವು ದೇಶೀಯ ಮಾರುಕಟ್ಟೆಯಲ್ಲಿ ದರವನ್ನು ಸ್ಥಿರಗೊಳಿಸಲಿದೆ ಮತ್ತು ರೈತರ ಆದಾಯವನ್ನು ಸುಧಾರಿಸಲಿದೆ ಎಂದು ಹೇಳಿದೆ.
2025–26ರ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್‌ನಿಂದ ಸೆಪ್ಟೆಂಬರ್) ಹೆಚ್ಚುವರಿಯಾಗಿ 5 ಲಕ್ಷ ಟನ್ ಸಕ್ಕರೆ ರಫ್ತು ಮಾಡಲು ಸರ್ಕಾರ ಅನುಮೋದನೆ ನೀಡಿದೆ.
ಸಕ್ಕರೆ ಕಾರ್ಖಾನೆಗಳು ಒದಗಿಸಿದ ಮಾಹಿತಿಯ ಪ್ರಕಾರ, ಜನವರಿ 31ರವರೆಗೆ ಸುಮಾರು 1.97 ಲಕ್ಷ ಟನ್ ಸಕ್ಕರೆಯನ್ನು ಮಾತ್ರ ರಫ್ತು ಮಾಡಲಾಗಿದೆ. ಇದರ ಜೊತೆಗೆ, ಇಲ್ಲಿಯವರೆಗೆ ಸಕ್ಕರೆ ಕಾರ್ಖಾನೆಗಳು ಸುಮಾರು 2.72 ಲಕ್ಷ ಟನ್ ಸಕ್ಕರೆ ರಫ್ತಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.