ADVERTISEMENT

ಬೆಂಗಳೂರು ‘ಗುಲಾಬಿ ಈರುಳ್ಳಿ: ರಫ್ತಿಗೆ ಕೇಂದ್ರದ ಅನುಮತಿ

ಮಾರ್ಚ್ 31ರವರೆಗೆ 10,000 ಟನ್ ಈರುಳ್ಳಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 17:37 IST
Last Updated 9 ಅಕ್ಟೋಬರ್ 2020, 17:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರು ಬೆಳೆಯುವ ‘ಗುಲಾಬಿ ಈರುಳ್ಳಿ’ (ರೋಸ್‌ ಆನಿಯನ್) ರಫ್ತು ಮಾಡಲು ಕೇಂದ್ರ ಸರ್ಕಾರ ಮತ್ತೆ ಅನುಮತಿ ನೀಡಿದೆ.

ರೈತರ ಮನವಿ ಪುರಸ್ಕರಿಸಿ ವಾರ್ಷಿಕ 10,000 ಟನ್ ಈರುಳ್ಳಿ ರಫ್ತಿಗೆ ಅನುಮತಿ ನೀಡಿ ಶುಕ್ರವಾರ ಆದೇಶಿಸಲಾಗಿದೆ ಎಂದು ಕೇಂದ್ರದ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತಿತರ ಜಿಲ್ಲೆಗಳಲ್ಲಿ ಬೆಳೆಯುವ ಗುಲಾಬಿ ಈರುಳ್ಳಿ ಹಾಗೂ ಆಂಧ್ರದ ಕೃಷ್ಣಪುರಂ ಈರುಳ್ಳಿಯ ರಫ್ತಿಗೆ ಮಾರ್ಚ್‌ 31ರವರೆಗೆ ಅವಕಾಶ ನೀಡುವ ಮೂಲಕ ವಿದೇಶಿ ವ್ಯಾಪಾರ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ.

ADVERTISEMENT

ದೇಶೀ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಿದ್ದರಿಂದ ಬೆಂಗಳೂರು ಗುಲಾಬಿ ಮತ್ತು ಕೃಷ್ಣಪುರಂ ಈರುಳ್ಳಿ ಸೇರಿದಂತೆ ಎಲ್ಲ ರೀತಿಯ ಈರುಳ್ಳಿಯನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ಕೇಂದ್ರ ಇತ್ತೀಚೆಗೆ ನಿಷೇಧಿಸಿತ್ತು.

ಸ್ಥಳೀಯವಾಗಿ ಕಡಿಮೆ ಬೇಡಿಕೆ ಹೊಂದಿರುವ ಬೆಂಗಳೂರು ಗುಲಾಬಿ ಹಾಗೂ ಕೃಷ್ಣಪುರಂ ಈರುಳ್ಳಿಗೆ ವಿದೇಶಗಳಲ್ಲಿ ಬೇಡಿಕೆ ಇದೆ. ಬಿಜೆಪಿ ಸಂಸದರು ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುಲಾಬಿ ಈರುಳ್ಳಿ ರಫ್ತು ನಿಷೇಧವನ್ನು ರದ್ದುಪಡಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.