ನವದೆಹಲಿ: ‘ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜನವರಿ ಅವಧಿಯಲ್ಲಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆ ಅಡಿಯಲ್ಲಿ ₹1.11 ಲಕ್ಷ ಕೋಟಿ ಬಡ್ಡಿರಹಿತ ಸಾಲ ನೀಡಲಾಗಿದೆ’ ಎಂದು ಕೇಂದ್ರ ಸಚಿವ ಪಂಕಜ್ ಕುಮಾರ್ ಚೌಧರಿ ಸೋಮವಾರ ತಿಳಿಸಿದ್ದಾರೆ.
2024–25ರ ಬಜೆಟ್‌ನಲ್ಲಿ ಬಡ್ಡಿರಹಿತ ಸಾಲವಾಗಿ ₹1.50 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ಈ ಪೈಕಿ ಜನವರಿ 31ರ ವರೆಗೆ ₹1.22 ಲಕ್ಷ ಕೋಟಿ ಮೊತ್ತದ ಸಾಲಕ್ಕೆ ಅನುಮೋದನೆ ನೀಡಲಾಗಿದ್ದು, ₹1.11 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
15ನೇ ಹಣಕಾಸು ಆಯೋಗದ ಪ್ರಕಾರ ಈ ಮೊತ್ತವನ್ನು ಹಂಚಿಕೆ ಮಾಡಲಾಗಿದೆ. ಈ ಸಾಲವನ್ನು ರಾಜ್ಯಗಳು ಬಂಡವಾಳ ವೆಚ್ಚ, ಮೂಲಸೌಕರ್ಯ ಮತ್ತು ನಿರ್ದಿಷ್ಟ ಸುಧಾರಣೆಗಳಿಗೆ ಹೆಚ್ಚಿನ ಖರ್ಚು ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
2023–24ರ ಬಜೆಟ್‌ನಲ್ಲಿ ₹1.10 ಲಕ್ಷ ಕೋಟಿ ಹಂಚಿಕೆ ಮಾಡಲಾಗಿತ್ತು. ಬಿಹಾರ ಅತಿ ಹೆಚ್ಚು ₹11,522 ಕೋಟಿ ಪಡೆದಿತ್ತು. ಉತ್ತರಪ್ರದೇಶ ₹10,795 ಕೋಟಿ, ಮಧ್ಯಪ್ರದೇಶ ₹10,166 ಕೋಟಿ ಮತ್ತು ಪಶ್ಚಿಮ ಬಂಗಾಳ ₹9,729 ಕೋಟಿ ಮೊತ್ತ ಪಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.