ನವದೆಹಲಿ: ಉತ್ತಮ ಮುಂಗಾರು ಹಾಗೂ ಅನುಕೂಲಕರ ವಾತಾವರಣದಿಂದಾಗಿ ದೇಶದಲ್ಲಿ 2024–25ನೇ ಮಾರುಕಟ್ಟೆ ವರ್ಷದಲ್ಲಿ (ಜುಲೈನಿಂದ ಜೂನ್) ಬೇಳೆಕಾಳು ಮತ್ತು ಈರುಳ್ಳಿ ಉತ್ಪಾದನೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕಳೆದ ಮಾರುಕಟ್ಟೆ ವರ್ಷದಲ್ಲಿ 34.17 ಲಕ್ಷ ಟನ್ ತೊಗರಿ ಉತ್ಪಾದನೆಯಾಗಿತ್ತು. ಈ ಬಾರಿ 35.02 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಒಟ್ಟಾರೆ ಶೇ 2.5ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದೆ.
ಈಗಾಗಲೇ, ಕೇಂದ್ರ ಕೃಷಿ ಸಚಿವಾಲಯವು ಕನಿಷ್ಠ ಬೆಂಬಲ ಬೆಲೆ ಅಡಿ ತೊಗರಿ ಖರೀದಿಗೆ ಚಾಲನೆ ನೀಡಿದೆ.
ಮುಂಗಾರು ಹಂಗಾಮು ಹಾಗೂ ಮುಂಗಾರು ನಂತರದ ಅವಧಿಯಲ್ಲಿ ಬಿತ್ತಿರುವ ಈರುಳ್ಳಿ ಉತ್ಪಾದನೆ ಉತ್ತಮವಾಗಿದೆ. ಹಿಂಗಾರು ಅವಧಿಯಲ್ಲೂ ಉತ್ತಮ ಬಿತ್ತನೆಯಾಗಿದೆ ಎಂದು ಸಚಿವಾಲಯ ಹೇಳಿದೆ.
ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಮತ್ತು ಪೂರೈಕೆ ಮೇಲೆ ನಿಗಾ ಇಡಲಾಗಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಆಹಾರ ಪದಾರ್ಥಗಳ ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದೆ.
ದೇಶೀಯ ಉತ್ಪಾದನೆಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಹಕರು ಮತ್ತು ರೈತರ ಹಿತದೃಷ್ಟಿಯಿಂದ ಸಕಾಲದಲ್ಲಿ ಬೆಲೆ ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.