ADVERTISEMENT

ಐಸಿಐಸಿಐ ಸಿಇಓ ಹುದ್ದೆಗೆ ಚಂದಾ ಕೊಚ್ಚಾರ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 17:14 IST
Last Updated 4 ಅಕ್ಟೋಬರ್ 2018, 17:14 IST
   

ನವದೆಹಲಿ:ಐಸಿಐಸಿಐ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಣಾಧಿಕಾರಿ (ಸಿಇಓ) ಹುದ್ದೆಗೆ ಚಂದಾ ಕೊಚ್ಚಾರ್‌ ರಾಜೀನಾಮೆ ನೀಡಿರುವುದಾಗಿ ಐಸಿಐಸಿಐ ಗುರುವಾರ ತಿಳಿಸಿದೆ.

ಚಂದಾ ಕೊಚ್ಚಾರ್‌ ಅವರಿಂದ ತೆರವಾದ ಸ್ಥಾನಕ್ಕೆ ಬ್ಯಾಂಕ್‌ನ ಮುಖ್ಯ ನಿರ್ವಹಣಾಧಿಕಾರಿ(ಸಿಒಓ) ಸಂದೀಪ್‌ ಬಕ್ಷಿ ಅವರನ್ನು ನೇಮಕ ಮಾಡಲು ಐಸಿಐಸಿಐ ಮಂಡಳಿ ನಿರ್ಧರಿಸಿದೆ. ಸಂದೀಪ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಮತ್ತು ಸಿಇಓ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಐದು ವರ್ಷಗಳು ಅವರು ಅಧಿಕಾರಾವಧಿ ಹೊಂದಿರಲಿದ್ದಾರೆ.

ಹುದ್ದೆಯಿಂದ ಶೀಘ್ರವೇ ತೆರವುಗೊಳಿಸುವಂತೆ ಚಂದಾ ಕೊಚ್ಚಾರ್‌ ಮಾಡಿದ್ದ ಮನವಿಗೆ ಸ್ಪಂದಿಸಿದ ಬ್ಯಾಂಕ್‌ನ ನಿರ್ದೇಶಕರ ಮಂಡಳಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಸಿಇಓ ಹುದ್ದೆಯಿಂದ ಬಿಡುಗಡೆ ಮಾಡಿದೆ.

ADVERTISEMENT

ಇನ್ನಷ್ಟು: ಕೊಚ್ಚಿ ಹೋದ ಚಂದ!

ಅತ್ಯಂತ ಕ್ಷಿಪ್ರ ಅವಧಿಯಲ್ಲಿ ವೃತ್ತಿ ಬದುಕಿನ ಉನ್ನತ ಸ್ಥಾನ

ಚಂದಾ ಕೊಚ್ಚಾರ್‌(56) ಅವರು ಬ್ಯಾಂಕರ್‌ ಆಗಿ ಪರಿಶ್ರಮದ ಮೂಲಕ ಕೀರ್ತಿ ಶಿಖರ ಏರಿದ್ದು ಗಮನಾರ್ಹ ಸಾಧನೆಯೇ. 1984ರಲ್ಲಿ ಟ್ರೈನೀ ಆಗಿ ಐಸಿಐಸಿಐ ಸೇರ್ಪಡೆಯಾದವರು ಅವರು. ಅಲ್ಲಿಂದ ಒಂದೊಂದೇ ಮೆಟ್ಟಿಲನ್ನು ಹತ್ತಿದರು. 1990ರಲ್ಲಿ ಬ್ಯಾಂಕಿನ ಕೋರ್‌ ಟೀಮ್‌ ಸೇರಿದ ಚಂದಾ, 94ರಲ್ಲಿ ಎಜಿಎಂ ಆದರು. 96ರಲ್ಲಿ ಡಿಜಿಎಂ, 98ರಲ್ಲಿ ಜನರಲ್‌ ಮ್ಯಾನೇಜರ್‌. 2001ರಲ್ಲಿ ಬ್ಯಾಂಕಿನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌, 2007ರಲ್ಲಿ ಸಿಎಫ್‌ಓ; ಕೊನೆಯದಾಗಿ ಸಿಇಓ.

ಹಿತಾಸಕ್ತಿ ಸಂಘರ್ಘಷದ ಆರೋಪ

ವಿಡಿಯೊಕಾನ್‌ ಸೇರಿದಂತೆ ಕೆಲ ಸಾಲ ಮಂಜೂರಾತಿ ಪ್ರಕರಣಗಳಲ್ಲಿ ಚಂದಾ ಕೊಚ್ಚರ್‌ ಅವರ ವಿರುದ್ಧ ಹಿತಾಸಕ್ತಿ ಸಂಘರ್ಷದ ದೂರುಗಳು ಕೇಳಿ ಬಂದಿದ್ದವು.

ವಿಡಿಯೊಕಾನ್‌ ಸಮೂಹಕ್ಕೆ 2012ರಲ್ಲಿ ₹ 3,250 ಕೋಟಿ ಸಾಲ ನೀಡಿಕೆಯಲ್ಲಿ ಹಿತಾಸಕ್ತಿ ಸಂಘರ್ಷ, ಸ್ವಜನ ಪಕ್ಷಪಾತ ಮತ್ತು ಪರಸ್ಪರ ಕೊಡು–ತೆಗೆದುಕೊಳ್ಳುವ ವ್ಯವಹಾರ ನಡೆದಿದೆ. ವಿಡಿಯೊಕಾನ್‌ ಗ್ರೂಪ್‌ ಅಧ್ಯಕ್ಷ ವೇಣುಗೋಪಾಲ್‌ ಧೂತ್‌ ಅವರು ಚಂದಾ ಕೊಚ್ಚರ್‌ ಅವರ ಪತಿ ದೀಪಕ್‌ ಕೊಚ್ಚರ್‌ ಅವರ ಜತೆ ವಾಣಿಜ್ಯ ಸಂಬಂಧ ಹೊಂದಿದ್ದಾರೆ. ಪರಸ್ಪರ ಕೊಡುಕೊಳ್ಳುವುದರ ಆಧಾರದ ಮೇಲೆ ಸಾಲ ಮಂಜೂರು ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು.

ಮಾರ್ಚ್‌ ತಿಂಗಳಲ್ಲಿ ದೂರುಗಳು ಬಹಿರಂಗವಾಗುತ್ತಿದ್ದಂತೆ, ಚಂದಾ ಕೊಚ್ಚರ್‌ ಅವರ ಬೆಂಬಲಕ್ಕೆ ನಿಂತಿದ್ದ ಆಡಳಿತ ಮಂಡಳಿಯು, ಅವರಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿತ್ತು. ಆನಂತರ ಅವರ ಮೇಲಿನ ಆರೋಪಗಳ ಕುರಿತು ಬ್ಯಾಂಕ್‌ ಸ್ವತಂತ್ರ ತನಿಖೆಗೆ ಆದೇಶಿಸಿತ್ತು. ತನಿಖಾ ವರದಿ ಪ್ರಕಟಗೊಳ್ಳುವ ಮೊದಲೇ ಅವರೀಗ ಹುದ್ದೆ ತೊರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.