ADVERTISEMENT

ಚಂದ್ರಯಾನ–3 ಯಶಸ್ಸು: ಅಂತರಿಕ್ಷಯಾನ, ರಕ್ಷಣಾ ವಲಯದ ಕಂಪನಿಗಳ ಷೇರು ಮೌಲ್ಯ ಹೆಚ್ಚಳ

ಪಿಟಿಐ
Published 24 ಆಗಸ್ಟ್ 2023, 14:05 IST
Last Updated 24 ಆಗಸ್ಟ್ 2023, 14:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಚಂದ್ರಯಾನ–3 ಯೋಜನೆಯ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಕೊಡುಗೆ ನೀಡಿದ ಹಲವು ಕಂಪನಿಗಳ ಷೇರುಗಳು ಗುರುವಾರದ ವಹಿವಾಟಿನಲ್ಲಿ ಗಳಿಕೆ ಕಂಡುಕೊಂಡವು. ಆದರೆ, ಕೆಲವು ಕಂಪನಿಗಳ ಷೇರುಗಳು ಲಾಭ ಗಳಿಕೆಯ ವಹಿವಾಟಿನ ಕಾರಣದಿಂದಾಗಿ ಇಳಿಕೆ ಕಾಣುವಂತಾಯಿತು.

ಸೆಂಟಮ್ ಎಲೆಕ್ಟ್ರಾನಿಕ್ಸ್‌, ಪಾರಸ್‌ ಡಿಫೆನ್ಸ್‌ ಆ್ಯಂಡ್‌ ಸ್ಪೇಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌, ಎಂಟಿಎಆರ್‌ ಟೆಕ್ನಾಲಜೀಸ್‌, ಭಾರತ್ ಫೋರ್ಜ್‌ ಕಂಪನಿಗಳ ಷೇರು ಮೌಲ್ಯ ಹೆಚ್ಚಾಗಿದ್ದರೆ, ಬಿಎಚ್‌ಇಎಲ್‌, ಹಿಂದುಸ್ತಾನ್‌ ಏರೊನಾಟಿಕ್ಸ್‌ ಕಂಪನಿ (ಎಚ್‌ಎಎಲ್) ಷೇರುಗಳು ಲಾಭ ಗಳಿಕೆಗೆ ಒಳಗಾಗಿ ಇಳಿಕೆ ಕಂಡಿವೆ. ಗುರುವಾರದ ವಹಿವಾಟಿನಲ್ಲಿ ಬಹುತೇಕ ಕಂಪನಿಗಳು 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿದ್ದವು.

ಅಂತರಿಕ್ಷಯಾನ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಕಂಪನಿಗಳ ಷೇರು ಮೌಲ್ಯವು ಬುಧವಾರದ ವಹಿವಾಟಿನಲ್ಲಿಯೂ ಏರಿಕೆ ಕಂಡಿತ್ತು.

ADVERTISEMENT

ಐದು ದಿನಗಳ ವಹಿವಾಟಿನಲ್ಲಿ ಸೆಂಟಮ್ ಎಲೆಕ್ಟ್ರಾನಿಕ್ಸ್‌ ಷೇರು ಮೌಲ್ಯ ಶೇ 25.17ರಷ್ಟು ಏರಿಕೆ ಕಂಡಿದೆ. ಪಾರಸ್‌ ಡಿಫೆನ್ಸ್‌ ಆ್ಯಂಡ್‌ ಸ್ಪೇಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಷೇರು ಮೌಲ್ಯ ಶೇ 13.73ರಷ್ಟು, ಎಂಟಿಎಆರ್‌ ಟೆಕ್ನಾಲಜೀಸ್‌ ಶೇ 1.80ರಷ್ಟು ಏರಿಕೆ ಕಂಡಿದೆ.

ಲಾಭ ಗಳಿಕೆ: ವಹಿವಾಟಿನ ಆರಂಭದಲ್ಲಿ ಉತ್ತಮ ಗಳಿಕೆ ಕಂಡಿದ್ದ ಕೆಲವು ಕಂಪನಿಗಳ ಷೇರುಗಳು ವಹಿವಾಟಿನ ಅಂತ್ಯದ ವೇಳೆಗೆ ಲಾಭ ಗಳಿಕೆಯ ಒತ್ತಡಕ್ಕೆ ಒಳಗಾಗಿ ಇಳಿಕೆ ಕಂಡವೆ. ಮಿಶ್ರ ಧಾತು ನಿಗಮ್‌ ಲಿಮಿಟೆಡ್‌ (ಶೇ 2.54ರಷ್ಟು), ಬಿಎಚ್‌ಇಎಲ್‌ (ಶೇ 1.78), ಹಿಂದುಸ್ತಾನ್ ಏರೊನಾಟಿಕ್ಸ್‌ ಲಿಮಿಟೆಡ್‌ (ಶೇ 1.60), ಎಲ್‌ ಆ್ಯಂಡ್‌ ಟಿ (ಶೇ 1.10), ಅಸ್ತ್ರಾ ಮೈಕ್ರೊವೇವ್‌ ಪ್ರಾಡಕ್ಟ್ಸ್‌ (ಶೇ 0.10) ಇಳಿಕೆ ಕಂಡಿವೆ.

ಅಮೆರಿಕದ ಆರ್ಥಿಕತೆಯು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ನಿರೀಕ್ಷೆಯು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ. ಇದರ ಜೊತೆಗೆ ಚಂದ್ರಯಾನ–3ರ ಯಶಸ್ಸು ಭಾರತದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಈ ಬೆಳವಣಿಗೆಗಳು ಅಲ್ಪಾವಧಿಯಲ್ಲಿ ಮಾರುಕಟ್ಟೆಯ ಮುನ್ನೋಟವನ್ನು ನಿಸ್ಸಂಶಯವಾಗಿ ಸಕಾರಾತ್ಮಕವಾಗಿಸಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ಗುರುವಾರದ ವಹಿವಾಟಿನಲ್ಲಿ ಕಂಪನಿಗಳ ಷೇರುಗಳ ಗಳಿಕೆ (%) ಸೆಂಟಮ್ ಎಲೆಕ್ಟ್ರಾನಿಕ್ಸ್‌;7.26 ಪಾರಸ್‌ ಡಿಫೆನ್ಸ್‌ ಆ್ಯಂಡ್‌ ಸ್ಪೇಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌;6.13 ಎಂಟಿಎಆರ್‌ ಟೆಕ್ನಾಲಜೀಸ್‌;3.83 ಭಾರತ್ ಫೋರ್ಜ್‌;0.72

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.