ADVERTISEMENT

ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಅನುದಾನ ನೀಡಿ: ಸಿದ್ದರಾಮಯ್ಯಗೆ ಕಾಸಿಯಾ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಾಸಿಯಾ ಮನವಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 15:54 IST
Last Updated 21 ಫೆಬ್ರುವರಿ 2025, 15:54 IST
ರಾಜ್ಯ ಬಜೆಟ್‌ನಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಮನವಿ ಪತ್ರ ಸಲ್ಲಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್ ಉಪಸ್ಥಿತರಿದ್ದರು
ರಾಜ್ಯ ಬಜೆಟ್‌ನಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಮನವಿ ಪತ್ರ ಸಲ್ಲಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್ ಉಪಸ್ಥಿತರಿದ್ದರು   

ಬೆಂಗಳೂರು: ಆಸ್ತಿ ನೋಂದಣಿಗೆ ಇ-ಖಾತಾ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ, ರಾಜ್ಯ ಸರ್ಕಾರವು ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಒತ್ತಾಯಿಸಿದೆ.

ಶುಕ್ರವಾರ ನಡೆದ 2025–26ನೇ ಸಾಲಿನ ರಾಜ್ಯ ಬಜೆಟ್‌ ಪೂರ್ವ ಸಮಾಲೋಚನೆ ಸಭೆಯಲ್ಲಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಮನವಿ ಪತ್ರ ಸಲ್ಲಿಸಿದರು.

ತಂತ್ರಾಂಶ ದೋಷದಿಂದಾಗಿ ಇ-ಖಾತಾದಲ್ಲಿನ ಲೋಪದೋಷ ಸರಿಪಡಿಸಲು ಬಹಳ ತಡವಾಗುತ್ತಿದೆ. ಇದನ್ನು ಸರಿಪಡಿಸಿದ ಇ-ಖಾತಾ ಪಡೆಯಲು ವಿಳಂಬವಾಗುತ್ತಿದೆ. ಬ್ಯಾಂಕ್‌ಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ನೋಂದಾಯಿಸಲು ಸಾಧ್ಯವಾಗದ ಸ್ವತ್ತುಗಳ ಮೇಲೆ ಸಾಲ ನೀಡಲು ನಿರಾಕರಿಸುತ್ತಿವೆ ಎಂದು ಗಮನ ಸೆಳೆದರು.

ADVERTISEMENT

ಬಹಳಷ್ಟು ಕೈಗಾರಿಕೆಗಳು ಕಂದಾಯ ನಿವೇಶನಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಕಟ್ಟಡಗಳು ಸಕ್ಷಮ ಪ್ರಾಧಿಕಾರಿಗಳಿಂದ ಯೋಜನೆಗಳಿಗೆ ಭೂ ಪರಿವರ್ತನೆ ಅಥವಾ ನಕ್ಷೆ ಅನುಮೋದನೆ ಪಡೆದಿಲ್ಲ. ಖಾತಾ ನೀಡುವುದು ನಿವೇಶನಕ್ಕೆ ಹೊರತು ಕಟ್ಟಡಕ್ಕಲ್ಲ ಎಂಬ ಅಂಶವನ್ನು ಪರಿಗಣಿಸಿ ರಾಜ್ಯವನ್ನು ಉದ್ಯಮ ಸ್ನೇಹಿಯಾಗಿ ಮಾಡಲು ನಿಟ್ಟಿನಲ್ಲಿ ಇಂತಹ ನಿಯಮಗಳನ್ನು ಪರಿಷ್ಕರಿಸಬೇಕಿದೆ ಎಂದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಮಾರ್ಗಸೂಚಿ ದರಗಳ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿದೆ. ಈ ವ್ಯವಸ್ಥೆಯು ಅವೈಜ್ಞಾನಿಕವಾಗಿದೆ. ಇದನ್ನು ಬಿಬಿಎಂಪಿಯಂತೆ ಯೂನಿಟ್ ಏರಿಯಾ ವ್ಯಾಲ್ಯೂ (ಯುಎವಿ) ಆಧಾರದ ತೆರಿಗೆ ನಿಗದಿಪಡಿಸಬೇಕಿದೆ ಎಂದು ಮನವಿ ಮಾಡಿದರು.

ಕೈಗಾರಿಕಾ ಪ್ರದೇಶಗಳಲ್ಲಿ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ 70ರಷ್ಟನ್ನು ಕೈಗಾರಿಕಾ ಮೂಲಸೌಕರ್ಯದ ಅಭಿವೃದ್ಧಿಗೆ ಮೀಸಲಿಡಬೇಕು. ಕಾಸಿಯಾದ ಶ್ರೇಷ್ಠತಾ ಹಾಗೂ ಅನ್ವೇಷಣಾ ಕೇಂದ್ರದ ಕಾಮಗಾರಿ ಪೂರ್ಣಕ್ಕೆ ₹5 ಕೋಟಿ ಹೆಚ್ಚುವರಿ ಅನುದಾನ ನೀಡಬೇಕು ಎಂದು ಕೋರಿದರು.

ಪ್ರಮುಖ ಬೇಡಿಕೆಗಳು

* ವಿದ್ಯುತ್ ತೆರಿಗೆಯನ್ನು ಶೇ 9ರಿಂದ ಶೇ 6ಕ್ಕೆ ಇಳಿಸಬೇಕು

* ಬೆಲ್ಲ ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕು

* ರೋಗಗ್ರಸ್ತ ಘಟಕಗಳನ್ನು ಪುನಃಶ್ಚೇತನಗೊಳಿಸಬೇಕು

* ಕೃಷಿ ಯಂತ್ರೋಪಕರಣಗಳ ಪರೀಕ್ಷಾ ವರದಿಗೆ ಕನಿಷ್ಠ ದರ ನಿಗದಿ ಮಾಡಬೇಕು

* ಶೇ 100ರಷ್ಟು ನವೀಕರಿಸಬಹುದಾದ ಇಂಧನ ಬಳಸುವ ಕೈಗಾರಿಕೋದ್ಯಮಿಗಳಿಗೆ ಬೆಂಬಲ ನೀಡಬೇಕು

* ಕೇಂದ್ರದ ವಿವಾದ್ ಸೆ ವಿಶ್ವಾಸ್ ಯೋಜನೆ ಮಾದರಿಯಂತೆ ರಾಜ್ಯದ ಎಂಎಸ್‌ಎಇಗಳಿಗೆ ತೆರಿಗೆ ವಿವಾದ ಬಗೆಹರಿಸಿಕೊಳ್ಳಲು ಯೋಜನೆ ಜಾರಿಗೊಳಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.