ADVERTISEMENT

ಕಾಫಿ ಬೆಲೆ ಏರಿಕೆ: ಬೆಳೆಗಾರರಲ್ಲಿ ಸಂಚಲನ

ಬ್ರೆಜಿಲ್‌ನಲ್ಲಿ ಪ್ರತಿಕೂಲ ಹವಾಮಾನದಿಂದ ಇಳುವರಿ ಕುಸಿಯುವ ಭೀತಿ

ರವಿ ಕೆಳಂಗಡಿ
Published 2 ಜುಲೈ 2021, 20:54 IST
Last Updated 2 ಜುಲೈ 2021, 20:54 IST
ಕಳಸದಲ್ಲಿ ರೊಬಸ್ಟಾ ಕಾಫಿಗೆ ಬೋರ್ಡೊ ದ್ರಾವಣ ಸಿಂಪಡಿಸುತ್ತಿರುವುದು
ಕಳಸದಲ್ಲಿ ರೊಬಸ್ಟಾ ಕಾಫಿಗೆ ಬೋರ್ಡೊ ದ್ರಾವಣ ಸಿಂಪಡಿಸುತ್ತಿರುವುದು   

ಕಳಸ: ಬ್ರೆಜಿಲ್‍ನಲ್ಲಿ ಈ ವಾರದ ಆರಂಭದಲ್ಲಿ ಕಂಡುಬಂದ ಪ್ರತಿಕೂಲ ಹವಾಮಾನ ಮತ್ತು ಇದರಿಂದ ಇಳುವರಿ ಕುಸಿಯಬಹುದು ಎಂಬ ವಿಶ್ಲೇಷಣೆಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಏರಿಕೆಯಾಗಿದೆ.

ಶುಕ್ರವಾರ ಲಂಡನ್ ಮಾರುಕಟೆಯಲ್ಲಿ ರೊಬಸ್ಟಾ ಕಾಫಿ ಬೆಲೆ ಟನ್‌ಗೆ 1,692 ಡಾಲರ್ (₹1,26,387) ಇದ್ದರೆ, ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಅರೇಬಿಕಾ ಕಾಫಿ ಬೆಲೆ ಪೌಂಡ್‌ಗೆ 155 ಸೆಂಟ್ಸ್ ಆಗಿತ್ತು (ಒಂದು ಕೆ.ಜಿ.ಗೆ ₹158). ಪರಿಣಾಮವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ರೊಬಸ್ಟಾ ಚೆರ್ರಿ ಮೂಟೆಯೊಂದಕ್ಕೆ (50 ಕೆ.ಜಿ) ₹ 3,600ರವರೆಗೆ ಖರೀದಿ ಆಗುತ್ತಿದ್ದು ಅರೇಬಿಕಾ ಪಾರ್ಚ್‍ಮೆಂಟ್ ಗರಿಷ್ಠ ದರ ಮೂಟೆಗೆ ₹ 11,400 ಆಗಿದೆ.

ಕಳೆದ ಎರಡು ವರ್ಷಗಳಲ್ಲಿ ಇದು ಗರಿಷ್ಠ ಬೆಲೆ ಆಗಿದ್ದು, ಬೆಳೆಗಾರರಲ್ಲಿ ಸಂಚಲನ ಮೂಡಿದೆ. ಆದರೆ, ಸಣ್ಣ ಬೆಳೆಗಾರರ ಬಳಿ ಕಾಫಿ ದಾಸ್ತಾನು ಇಲ್ಲದೆ, ಬೆಲೆ ಏರಿಕೆಯ ಲಾಭ ಬೆಳೆಗಾರರಿಗೆ ಸಿಗದಂತಾಗಿದೆ. ಫೆಬ್ರುವರಿಯಲ್ಲಿ ‘ನಾವು ಕಾಫಿ ಕೊಯ್ದಾಗ ಮೂಟೆಗೆ ₹ 3 ಸಾವಿರ ಇತ್ತು. ಆಗಲೇ ಮಾರಿಬಿಟ್ಟೆವು’ ಎಂದು ಸಣ್ಣ ಬೆಳೆಗಾರರೊಬ್ಬರು ಬೇಸರದಿಂದ ಹೇಳಿದರು.

ADVERTISEMENT

‘ಬ್ರೆಜಿಲ್‌ನಲ್ಲಿ ಇಳುವರಿ ಕುಸಿತ’
ಬ್ರೆಜಿಲ್‍ನ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಈ ವರ್ಷ ನೀರಿನ ಕೊರತೆ ಉಂಟಾಗಿದೆ. ಇದರಿಂದ ಅಲ್ಲಿನ ಫಸಲು ಶೇ 20ರಷ್ಟು ಕಡಿಮೆ ಆಗಬಹುದು ಎಂಬ ಅಂದಾಜು ಇದೆ. ಪ್ರಪಂಚದಲ್ಲಿ ಅರೇಬಿಕಾ ಬೆಳೆಯಲ್ಲಿ ಎರಡನೆಯ ಸ್ಥಾನದಲ್ಲಿರುವ ಕೊಲಂಬಿಯಾದಿಂದ ಕೂಡ ಈ ಬಾರಿ ಜಾಗತಿಕ ಮಾರುಕಟ್ಟೆಗೆ ಕಾಫಿ ಪೂರೈಕೆ ಕಡಿಮೆಯಾಗಿದೆ. ಇದು ಕೂಡ ಬೆಲೆ ಏರಿಕೆಗೆ ಕಾರಣ. ವಿಶ್ವದ ಅತಿ ದೊಡ್ಡ ರೊಬಸ್ಟಾ ಕಾಫಿ ಉತ್ಪಾದಕ ರಾಷ್ಟ್ರವಾದ ವಿಯೆಟ್ನಾಂನಿಂದ ಹಡಗುಗಳ ಮೂಲಕ ಸಾಗಣೆ ಸಮಸ್ಯೆಯಾಗಿದೆ. ಇದರಿಂದ ಯೂರೋಪ್ ರಾಷ್ಟ್ರಗಳಿಗೆ ಸಕಾಲಕ್ಕೆ ಬೇಕಾದಷ್ಟು ಕಾಫಿ ಪೂರೈಸಲಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಕೊರತೆ ಉಂಟಾಗಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.