ADVERTISEMENT

ಕಾಫಿ ಉತ್ಪಾದನೆ ದುಪ್ಪಟ್ಟು ಗುರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 0:25 IST
Last Updated 19 ನವೆಂಬರ್ 2025, 0:25 IST
ಎಂ.ಜೆ.ದಿನೇಶ್‌
ಎಂ.ಜೆ.ದಿನೇಶ್‌   

ಚಿಕ್ಕಮಗಳೂರು: ‘ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ 100ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ ದೇಶದ ಕಾಫಿ ಉತ್ಪಾದನೆಯನ್ನು ವಾರ್ಷಿಕ 7 ಲಕ್ಷ ಟನ್‌ಗೆ ಹೆಚ್ಚು ಮಾಡಬೇಕು ಎಂಬ ಗುರಿಯನ್ನು ಕೇಂದ್ರ ಕಾಫಿ ಮಂಡಳಿ ಹೊಂದಿದೆ’ ಎಂದು ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು.

ಕರ್ನಾಟಕ ಬೆಳೆಗಾರರ ಸಂಘದ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ಇಷ್ಟು ಪ್ರಮಾಣದಲ್ಲಿ ಉತ್ಪಾದನೆ ಸಾಧ್ಯವಾದಲ್ಲಿ, ಅದರಲ್ಲಿ ವಿಶೇಷ ಬಗೆಯ ಕಾಫಿ ಪ್ರಮಾಣವು ಶೇಕಡ 15ರಷ್ಟು ಇರಬೇಕು ಎಂಬ ಗುರಿಯನ್ನೂ ಹೊಂದಲಾಗಿದೆ’ ಎಂದು ಹೇಳಿದರು. ಈಗ ದೇಶದ ವಾರ್ಷಿಕ ಕಾಫಿ ಉತ್ಪಾದನೆ ಪ್ರಮಾಣವು 3.5 ಲಕ್ಷ ಟನ್‌ ಆಗಿದೆ.

ಕಾಫಿ ತೋಟಗಳಲ್ಲಿ ಬಳಕೆ ಮಾಡುವ ಕಳೆ ಕೀಳುವ ಯಂತ್ರಗಳಿಗೆ ಸಬ್ಸಿಡಿ ನೀಡಲು ಕಾಫಿ ಮಂಡಳಿಯು ಸಿದ್ಧವಿದೆ. ಕಾರ್ಮಿಕರ ಅಗತ್ಯವನ್ನು ಕಡಿಮೆ ಮಾಡುವುದು ಮಂಡಳಿಯ ಕಾರ್ಯಸೂಚಿಗಳಲ್ಲಿ ಸೇರಿದೆ ಎಂದು ತಿಳಿಸಿದರು.

ADVERTISEMENT

ಕಾಫಿ ಬೆಳೆಗಾರರು ತಮ್ಮ ಬೆಳೆಗೆ ವಿದೇಶಗಳ ಮಾರುಕಟ್ಟೆಯನ್ನು ಮಾತ್ರವೇ ನೆಚ್ಚಿಕೊಂಡು ಇರಲು ಸಾಧ್ಯವಿಲ್ಲ. ದೇಶದಲ್ಲಿನ ಬಳಕೆಯನ್ನೂ ಹೆಚ್ಚು ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಮಹಿಳಾ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು, ಕಾಫಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಕಾಫಿ ಮಂಡಳಿಯ ಆವರಣದಲ್ಲಿ ಒಂದು ಕಿಯೋಸ್ಕ್‌ ಆರಂಭಿಸಲಾಗಿದೆ. ಇಂತಹ 10 ಸಾವಿರ ಕಿಯೋಸ್ಕ್‌ಗಳನ್ನು ದೇಶದಾದ್ಯಂತ ಆರಂಭಿಸುವ ಗುರಿ ಇದೆ. ಪ್ರತಿ ಕಿಯೋಸ್ಕ್‌ ಕೂಡ ದಿನವೊಂದಕ್ಕೆ 2 ಕೆ.ಜಿ. ಕಾಫಿ ಪುಡಿ ಬಳಸಿದರೆ ದೇಶದಲ್ಲಿ ಕಾಫಿ ಬಳಕೆಯು ಹೆಚ್ಚುತ್ತದೆ ಎಂದು ಅವರು ವಿವರಿಸಿದರು.

ಹೆಚ್ಚಿನ ಇಳುವರಿ ನೀಡುವ ಹಾಗೂ ಕೀಟಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುವ ಮೂರು ಬಗೆಯ ಕಾಫಿ ತಳಿಗಳನ್ನು ಮಂಡಳಿಯು ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಎ ಅಧ್ಯಕ್ಷ ಅರವಿಂದ ರಾವ್, ಹವಾಮಾನ ಆಧಾರಿತ ವಿಮಾ ಯೋಜನೆಯ ನೆರವು ಕಾಫಿ ಬೆಳೆಗಾರರಿಗೆ ಅಗತ್ಯವಾಗಿದೆ ಎಂದರು. ಪ್ರತಿಕೂಲ ಹವಾಮಾನವು ಕಾಫಿ ಬೆಳೆಯ ಮೇಲೆ ಪರಿಣಾಮ ಬೀರಿದೆ ಎಂದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್‌, ಆಂಧ್ರಪ್ರದೇಶದ ಅರಕು ಕಣಿವೆಯ ಕಾಫಿ ಬೆಳೆಗಾರರ ಮಾದರಿಯಲ್ಲೇ ರಾಜ್ಯದ ಕಾಫಿ ಬೆಳೆಗಾರರು ಕೂಡ ತಮ್ಮ ಕಾಫಿಗೆ ಬ್ರ್ಯಾಂಡ್‌ ಮೌಲ್ಯ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಟಾಟಾ ಸನ್ಸ್‌ನ ನಿರ್ದೇಶಕ ಭಾಸ್ಕರ ಭಟ್ ಅವರು, ‘ದೇಶದ ಕಾಫಿ ಬೆಳೆಗಾರರು ವಿಶೇಷ ಬಗೆಯ ಕಾಫಿ ಹಾಗೂ ಪ್ರೀಮಿಯಂ ವರ್ಗದ ಕಾಫಿಯ ಮೇಲೆ ಗಮನ ನೀಡಬೇಕು. ಗ್ರಾಹಕರು ಹೆಚ್ಚಿನ ಗುಣಮಟ್ಟದ ಕಾಫಿಯನ್ನು ಬಳಸಲು ಬಯಸುತ್ತಿದ್ದಾರೆ’ ಎಂದು ಹೇಳಿದರು.

ಯುರೋಪ್‌ ಅಥವಾ ಅಮೆರಿಕಕ್ಕೆ ಕಾಫಿ ರಫ್ತಿನ ಬಗ್ಗೆ ಹೆಚ್ಚು ಚಿಂತೆ ಮಾಡುವುದಕ್ಕಿಂತ ದೇಶಿ ಮಾರುಕಟ್ಟೆಯ ಮೇಲೆ ಗಮನಹರಿಸಬೇಕು. ಇಲ್ಲಿನ ಯುವ ಗ್ರಾಹಕರ ವರಮಾನ ಹೆಚ್ಚಾಗುತ್ತಿದೆ, ಯುವ ಗ್ರಾಹಕರು ಪ್ರೀಮಿಯಂ ಗುಣಮಟ್ಟದ ಕಾಫಿಯ ಬಳಕೆಗೆ ಸಿದ್ಧರಿದ್ದಾರೆ ಎಂದು ಹೇಳಿದರು.

ಹೆಚ್ಚಿನ ಇಳುವರಿ ನೀಡುವ ಹಾಗೂ ಕೀಟಗಳಿಗೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುವ ಮೂರು ಬಗೆಯ ಕಾಫಿ ತಳಿಗಳನ್ನು ಮಂಡಳಿಯು ಬಿಡುಗಡೆ ಮಾಡಲಿದೆ.
ಎಂ.ಜೆ. ದಿನೇಶ್, ಕಾಫಿ ಮಂಡಳಿ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.