ADVERTISEMENT

ಇರಾನ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿ: ಕಚ್ಚಾ ತೈಲ ದರ ಶೇ 8ರಷ್ಟು ಏರಿಕೆ

ಇರಾನ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಿಂದ ದರ ಏರಿಕೆ

ಪಿಟಿಐ
Published 13 ಜೂನ್ 2025, 16:31 IST
Last Updated 13 ಜೂನ್ 2025, 16:31 IST
ಕಚ್ಚಾ ತೈಲ
ಕಚ್ಚಾ ತೈಲ   

ಲಂಡನ್‌ / ನವದೆಹಲಿ: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಬಿಕ್ಕಟ್ಟು ಉಲ್ಬಣಗೊಂಡಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಶುಕ್ರವಾರ ಶೇ 8ರಷ್ಟು ಏರಿಕೆ ಆಗಿದೆ. ಪ್ರತೀ ಬ್ಯಾರೆಲ್‌ ದರ 75 ಡಾಲರ್‌ಗೆ ಮುಟ್ಟಿದೆ.

ಗುರುವಾರದ ವಹಿವಾಟಿನಲ್ಲಿ ಪ್ರತೀ ಬ್ಯಾರೆಲ್‌ ದರವು 68.77 ಡಾಲರ್ ಆಗಿತ್ತು. ಸಂಘರ್ಷವು ಶಮನಗೊಳ್ಳದಿದ್ದರೆ ಬ್ಯಾರೆಲ್‌ ದರ 100 ಡಾಲರ್‌ಗೆ ಮುಟ್ಟಬಹುದು ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಇಸ್ರೇಲ್ ಸಂಘರ್ಷವನ್ನು ಹೆಚ್ಚಿಸಲು ಪ್ರಯತ್ನಿಸಿದರೆ, ವಿಶ್ವದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿಯಾಗಬಹುದು. ಇದರಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಬಹುದು.

ADVERTISEMENT

ಇರಾನ್ ಮತ್ತು ಒಮಾನ್ ನಡುವಿನ ಕಿರಿದಾದ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕವೇ ಸೌದಿ ಅರೇಬಿಯಾ, ಇರಾನ್, ಯುಎಇ, ಕುವೈತ್ ಮತ್ತು ಇರಾಕ್ ತಮ್ಮ ಹೆಚ್ಚಿನ ಕಚ್ಚಾ ತೈಲವನ್ನು ಏಷ್ಯಾಕ್ಕೆ ರಫ್ತು ಮಾಡುತ್ತವೆ. ಈ ಮಾರ್ಗದಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡರೆ ಕಚ್ಚಾ ತೈಲದ ಬೆಲೆ ಏರಿಕೆಯಾಗಲಿದೆ.

ಪ‍್ರತಿ ದಿನ ಅಂದಾಜು 2 ಕೋಟಿ ಬ್ಯಾರೆಲ್ ತೈಲ ಈ ಮಾರ್ಗದ ಮೂಲಕ ಪೂರೈಕೆ ಆಗುತ್ತದೆ. ಇದು ವಿಶ್ವದ ಒಟ್ಟು ತೈಲ ಬಳಕೆಯ ಐದನೇ ಒಂದು ಭಾಗದಷ್ಟಾಗಿದೆ. 

‘ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ಬ್ರೆಂಟ್‌ ಕಚ್ಚಾ ತೈಲ ದರವು ಗರಿಷ್ಠ ಮಟ್ಟಕ್ಕೆ ತಲುಪಿದೆ. ಬಿಕ್ಕಟ್ಟು ಶಮನಗೊಳ್ಳದಿದ್ದರೆ ಹಣದುಬ್ಬರ ಹೆಚ್ಚಾಗುವ ಆತಂಕವಿದೆ’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ತೈಲ ಕಂಪನಿಗಳ ಷೇರು ಮೌಲ್ಯ ಇಳಿಕೆ: ಕಚ್ಚಾ ತೈಲ ಬೆಲೆ ಏರಿಕೆಯಿಂದ ಭಾರತದ ತೈಲ ಮಾರುಕಟ್ಟೆ ಕಂಪನಿಗಳು, ವಿಮಾನಯಾನ, ಪೇಂಟ್‌ ಮತ್ತು ಟೈರ್‌ ಕಂಪನಿಗಳ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಡೆಟ್, ಭಾರತೀಯ ತೈಲ ನಿಗಮ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಡೆಟ್ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಸ್ಪೈಸ್‌ಜೆಟ್‌ ಮತ್ತು ಇಂಟರ್‌ಗ್ಲೋಬ್ ಏವಿಯೇಷನ್‌ ಷೇರಿನ ಮೌಲ್ಯ ಕಡಿಮೆಯಾಗಿದೆ. ಬರ್ಗರ್‌, ಇಂಡಿಗೊ ಮತ್ತು ಏಷ್ಯನ್‌ ಪೇಂಟ್ಸ್‌ ಮತ್ತು ಸಿಯಟ್ ಹಾಗೂ ಅಪೋಲೊ ಟೈರ್ಸ್‌ನ ಷೇರಿನ ಮೌಲ್ಯದಲ್ಲೂ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.