ADVERTISEMENT

ವಿತ್ತೀಯ ಕೊರತೆ ಶೇ 14ಕ್ಕೆ ತಲುಪಲಿದೆ: ರಂಗರಾಜನ್‌

ಪಿಟಿಐ
Published 8 ಅಕ್ಟೋಬರ್ 2020, 14:37 IST
Last Updated 8 ಅಕ್ಟೋಬರ್ 2020, 14:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ವಿತ್ತೀಯ ಕೊರತೆಯು ನಿಗದಿಪಡಿಸಿರುವ ಶೇಕಡ 6ರ ಮಟ್ಟವನ್ನೂ ಮೀರಿ ಶೇ 14ಕ್ಕೆ ಏರಿಕೆಯಾಗಲಿದೆ ಎಂದು ಆರ್‌ಬಿಐನ ಮಾಜಿ ಗವರ್ನರ್‌ ಸಿ. ರಂಗರಾಜನ್‌ ಗುರುವಾರ ಹೇಳಿದ್ದಾರೆ.

ಐಸಿಎಫ್‌ಎಐ ಬಿಸಿನೆಸ್‌ ಸ್ಕೂಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬ್ಯಾಂಕ್‌ಗಳು ಸಾಲ ನೀಡುವಾಗ ಹೆದರಬಾರದು, ಹುಚ್ಚು ಸಾಹಸಕ್ಕೂ ಕೈ ಹಾಕಬಾರದು. ಇಂದಿನ ಸಾಲವು ನಾಳೆಗೆ ವಸೂಲಾಗದ ಸಾಲವಾಗಬಾರದು’ ಎಂದರು.

ವಿತ್ತೀಯ ಕೊರತೆಯು ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 13.8 ಅಥವಾ ಶೇ 14ರಷ್ಟಾಗಲಿದೆ. ಶೇ 6ರಲ್ಲಿ ಮಿತಿಗೊಳಿಸುವ ಗುರಿ ನಿಗದಿ ಮಾಡಲಾಗಿತ್ತು. ಆದರೆ, ಅದಕ್ಕಿಂತ ಎರಡು ಪಟ್ಟು ಹೆಚ್ಚಿನದ್ದಾಗಲಿದೆ.ಜಿಎಸ್‌ಟಿ ಪರಿಹಾರ ಮೊತ್ತವನ್ನು ನೀಡಲು ಹೆಚ್ಚುವರಿ ಸಾಲ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದಲ್ಲಿ, ಅದರಿಂದಾಗಿ ವಿತ್ತೀಯ ಕೊರತೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಸದ್ಯದ ಪರಿಸ್ಥಿತಿಯಲ್ಲಿ ಆರ್‌ಬಿಐನ ಹಣಕಾಸು ನೀತಿಯು ಸ್ಥಿರತೆಯಿಂದ ಕೂಡಿದೆ. ಹೀಗಾಗಿಯೇ ಹೆಚ್ಚು ಸಾಲ ನೀಡಲು ಬ್ಯಾಂಕ್‌ಗಳ ಬಳಿ ಸಾಕಷ್ಟು ನಗದು ಲಭ್ಯವಿರುವಂತಾಗಿದೆ. ಅರ್ಥ ವ್ಯವಸ್ಥೆ ಕುಸಿದಿರುವಾಗಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ವೆಚ್ಚ ಮಾಡಬೇಕು. ಅದರಲ್ಲಿಯೂ ಮುಖ್ಯವಾಗಿ ಆರೋಗ್ಯ ಸೇವೆಗಳು, ಪರಿಹಾರ ಮತ್ತು ಪುನರ್ವಸತಿ ಹಾಗೂ ಆರ್ಥಿಕ ಚೇತರಿಕೆ ಉತ್ತೇಜಿಸುವ ಕಡೆಗೆ ವೆಚ್ಚ ಮಾಡುವ ಅಗತ್ಯವಿದೆ’ ಎಂದು ರಂಗರಾಜನ್‌ ಹೇಳಿದ್ದಾರೆ.

‘ಕಳೆದ ಮೂರು ತಿಂಗಳಿನಿಂದ ಭಾರತಕ್ಕೆ ಬಂಡವಾಳ ಹರಿದುಬರುತ್ತಿರುವುದು ಪ್ರೋತ್ಸಾಹದಾಯಕ ಬೆಳವಣಿಗೆಯಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.