ADVERTISEMENT

ಟ್ಯಾಕ್ಸಿ ಸೇವೆ ಒದಗಿಸಲು ಒಗ್ಗೂಡಿದ ಸಹಕಾರ ಸಂಘಗಳು

ಪಿಟಿಐ
Published 3 ಆಗಸ್ಟ್ 2025, 14:28 IST
Last Updated 3 ಆಗಸ್ಟ್ 2025, 14:28 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ನವದೆಹಲಿ: ಆ್ಯ‍ಪ್‌ ಆಧಾರಿತ ಸಾರಿಗೆ ಸೇವಾ ಕಂಪನಿಗಳಾದ ಓಲಾ ಮತ್ತು ಉಬರ್‌ಗೆ ಸ್ಪರ್ಧೆ ನೀಡಲು ದೇಶದ ಸಹಕಾರ ರಂಗ ಸಜ್ಜಾಗಿದೆ. ‘ಭಾರತ್’ ಹೆಸರಿನ ಬ್ರ್ಯಾಂಡ್‌ ಅಡಿಯಲ್ಲಿ ಈ ವರ್ಷದ ಅಂತ್ಯದೊಳಗೆ ದೇಶದಲ್ಲಿ ಟ್ಯಾಕ್ಸಿ ಸೇವೆ ನೀಡಲು ಕೆಲವು ಸಹಕಾರ ಸಂಘಗಳು ಒಗ್ಗೂಡಿವೆ.

ಈ ಪ್ರಯತ್ನಕ್ಕೆ ₹300 ಕೋಟಿಯ ಅಧಿಕೃತ ಬಂಡವಾಳ ಇದೆ, ನಾಲ್ಕು ರಾಜ್ಯಗಳಲ್ಲಿ 200 ಚಾಲಕರು ಹೆಸರು ನೋಂದಾಯಿಸಿದ್ದಾರೆ. ಬಹುರಾಜ್ಯ ಟ್ಯಾಕ್ಸಿ ಸಹಕಾರ ಸಂಘವನ್ನು ಜೂನ್‌ 6ರಂದು ನೋಂದಾಯಿಸಲಾಗಿದೆ.

ADVERTISEMENT

ಟ್ಯಾಕ್ಸಿ ಸಹಕಾರ ಸಂಘವು ದೇಶದ ಎಂಟು ಪ್ರಮುಖ ಸಹಕಾರ ಸಂಘಗಳನ್ನು ಪ್ರತಿನಿಧಿಸುತ್ತದೆ. ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ), ಇಫ್ಕೊ, ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಒಕ್ಕೂಟ, ಕೃಷಕ್ ಭಾರತಿ ಸಹಕಾರ ನಿಯಮಿತ, ನಬಾರ್ಡ್, ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಸಹಕಾರ ರಫ್ತು ನಿಯಮಿತ ಈ ಎಂಟು ಸಹಕಾರ ಸಂಘಗಳ ಸಾಲಿಗೆ ಸೇರಿವೆ.

ದೇಶದಲ್ಲಿ ಈ ವರ್ಷಾಂತ್ಯದ ವೇಳೆಗೆ ಸಹಕಾರ ಮಾದರಿಯಲ್ಲಿ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಈಚೆಗೆ ಹೇಳಿದ್ದರು. ‘ಚಾಲಕರಿಗೆ ಉತ್ತಮ ಪ್ರತಿಫಲ ಸಿಗಬೇಕು, ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಹಾಗೂ ಸುರಕ್ಷಿತವಾದ ಸೇವೆಯು ಕೈಗೆಟಕುವ ದರದಲ್ಲಿ ಸಿಗಬೇಕು ಎಂಬುದು ನಮ್ಮ ಪ್ರಮುಖ ಉದ್ದೇಶ’ ಎಂದು ಎನ್‌ಸಿಡಿಸಿ ಉಪ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಗುಪ್ತ ಹೇಳಿದ್ದಾರೆ.

ಟ್ಯಾಕ್ಸಿ ಸಹಕಾರ ಸಂಘದಲ್ಲಿ ಸರ್ಕಾರದ ಪಾಲು ಇಲ್ಲ. ಇದಕ್ಕೆ ಅಗತ್ಯವಿರುವ ಹಣಕಾಸಿನ ನೆರವನ್ನು ಸಹಕಾರ ಸಂಘಗಳಿಂದ ಪಡೆಯಲಾಗಿದೆ. ದೆಹಲಿ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರದ ಚಾಲಕರು ಈ ಸಹಕಾರ ಸಂಘದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಾಲವನ್ನು ವಿಸ್ತರಿಸಲು ಇತರ ಸಹಕಾರ ಸಂಘಗಳನ್ನು ಸಂಪರ್ಕ ಮಾಡುವ ಕೆಲಸ ನಡೆದಿದೆ.

ಸೇವೆಯನ್ನು ಒದಗಿಸಲು ಅಗತ್ಯವಿರುವ ಆ್ಯಪ್‌ ಅಭಿವೃದ್ಧಿಪಡಿಸಲು ತಂತ್ರಜ್ಞಾನ ಪಾಲುದಾರರನ್ನು ಆಯ್ಕೆ ಮಾಡಲು ಟೆಂಡರ್ ಹೊರಡಿಸಲಾಗಿದೆ. ಕೆಲವು ದಿನಗಳಲ್ಲಿ ಇದು ಅಂತಿಮಗೊಳ್ಳಲಿದೆ ಎಂದು ಗುಪ್ತ ತಿಳಿಸಿದ್ದಾರೆ. ಡಿಸೆಂಬರ್ ವೇಳೆಗೆ ಆ್ಯಪ್ ಸಿದ್ಧವಾಗುವ ನಿರೀಕ್ಷೆ ಇದೆ ಎಂದಿದ್ದಾರೆ.

ಮಾರುಕಟ್ಟೆ ಪ್ರಚಾರ ತಂತ್ರವನ್ನು ಸಿದ್ಧಪಡಿಸಲು ಐಐಎಂ–ಬೆಂಗಳೂರು ಜೊತೆ ಒಪ್ಪಂದ ಆಗಿದೆ. ಸೇವೆಗಳು ಎಲ್ಲೆಡೆ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈಗ ಸದಸ್ಯತ್ವ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.