ADVERTISEMENT

ಕೊರೊನಾ ಕವಚ ಪಾಲಿಸಿ

ವಿಮೆ ಕಂಪನಿಗಳಿಗೆ ಪ್ರಾಧಿಕಾರ ಸೂಚನೆ

ಪಿಟಿಐ
Published 28 ಜೂನ್ 2020, 11:33 IST
Last Updated 28 ಜೂನ್ 2020, 11:33 IST
–
   

ನವದೆಹಲಿ:ಕೋವಿಡ್‌ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗುವ ಪ್ರತ್ಯೇಕ ವಿಮೆ ಪಾಲಿಸಿಗಳನ್ನು ಜುಲೈ 10ರ ಒಳಗೆ ಪರಿಚಯಿಸಲು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಆರೋಗ್ಯ ಮತ್ತು ಸಾಮಾನ್ಯ ವಿಮೆ ಕಂಪನಿಗಳಿಗೆ ಸೂಚಿಸಿದೆ.

’ಕೋವಿಡ್‌–19’ ಪೀಡಿತರ ಸಂಖ್ಯೆಯಲ್ಲಿ ದಿನೇ ದಿನೇ ಗಮನಾರ್ಹ ಏರಿಕೆ ಕಂಡು ಬರುತ್ತಿರುವುದರಿಂದ ಪ್ರಾಧಿಕಾರವು ಈ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ‘ಕೊರೊನಾ ಕವಚ್‌ ಪಾಲಿಸಿ‘ನಡಿ, ಮೂರುವರೆ, ಆರೂವರೆ ಮತ್ತು ಒಂಬತ್ತುವರೆ ತಿಂಗಳ ಅಲ್ಪಾವಧಿ ವಿಮೆ ಸೌಲಭ್ಯ ಲಭ್ಯ ಇರಬೇಕು. ವಿಮೆ ಪರಿಹಾರ ಮೊತ್ತವು ಕನಿಷ್ಠ ₹ 50 ಸಾವಿರದಿಂದ ಗರಿಷ್ಠ 5 ಲಕ್ಷದವರೆಗೆ ಇರಬೇಕು.

ಪಾಲಿಸಿಗಳ ಹೆಸರು ‘ಕೊರೊನಾ ಕವಚ್‌ ಪಾಲಿಸಿ’ ಎಂದು ಇರಬೇಕು. ಇದರ ಮುಂದೆ ಕಂಪನಿಗಳ ಹೆಸರು ಸೇರ್ಪಡೆ ಮಾಡಬೇಕು. ಪಾಲಿಸಿಯ ಪ್ರೀಮಿಯಂ ಒಂದೇ ಕಂತಿನಲ್ಲಿ ಪಾವತಿಸುವಂತಿರಬೇಕು. ದೇಶದಾದ್ಯಂತ ಒಂದೇ ಪ್ರೀಮಿಯಂ ದರ ಇರಬೇಕು. ಯಾವುದೇ ಪ್ರದೇಶ, ವಲಯ ಆಧರಿಸಿ ಪ್ರೀಮಿಯಂ ನಿಗದಿ ಮಾಡಬಾರದು.

ADVERTISEMENT

ಕೋವಿಡ್‌ ಚಿಕಿತ್ಸೆ ಜತೆಗೆ ವ್ಯಕ್ತಿಯಲ್ಲಿ ಈ ಮೊದಲೇ ಇರಬಹುದಾದ ಕಾಯಿಲೆಯ ಚಿಕಿತ್ಸೆಗೂ ಈ ಪಾಲಿಸಿ ಅನ್ವಯವಾಗಬೇಕು.

ಮನೆಯಲ್ಲಿ ಗರಿಷ್ಠ 14 ದಿನಗಳವರೆಗೆ ಪಡೆಯುವ ಚಿಕಿತ್ಸೆ, ಆಯೂಷ್‌ ಚಿಕಿತ್ಸೆ, ಆಸ್ಪತ್ರೆ ಸೇರ್ಪಡೆ ಮುಂಚಿನ ಮತ್ತು ನಂತರದ ವೆಚ್ಚಗಳನ್ನು ಪಾಲಿಸಿಯು ಒಳಗೊಂಡಿರಬೇಕು. ಜುಲೈ 10ರ ಒಳಗೆ ಈ ವಿಮೆ ಉತ್ಪನ್ನವನ್ನು ಜಾರಿಗೆ ತರುವುದನ್ನು ಕಡ್ಡಾಯಗೊಳಿಸಲಾಗಿದೆ.

ಜುಲೈ 10

ಪಾಲಿಸಿ ಜಾರಿಗೆ ತರಲು ವಿಧಿಸಿರುವ ಗಡುವು

₹ 50 ಸಾವಿರ

ಕನಿಷ್ಠ ವಿಮೆ ಪರಿಹಾರ ಮೊತ್ತ

₹ 5 ಲಕ್ಷ

ಗರಿಷ್ಠ ವಿಮೆ ಪರಿಹಾರ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.