ADVERTISEMENT

ಜಿಡಿಪಿ ಶೇ 1.6ಕ್ಕೆ ಕುಸಿತ: ಗೋಲ್ಡ್‌ಮನ್‌ ಸ್ಯಾಚ್ಸ್‌

ಪಿಟಿಐ
Published 8 ಏಪ್ರಿಲ್ 2020, 15:13 IST
Last Updated 8 ಏಪ್ರಿಲ್ 2020, 15:13 IST
ಗೋಲ್ಡ್‌ಮನ್‌ ಸ್ಯಾಚ್ಸ್‌
ಗೋಲ್ಡ್‌ಮನ್‌ ಸ್ಯಾಚ್ಸ್‌   

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ (2020–21) ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಹಲವು ದಶಕಗಳ ಕನಿಷ್ಠ ಮಟ್ಟವಾದ ಶೇ 1.6ಕ್ಕೆ ಕುಸಿಯಲಿದೆ ಎಂದು ಅಮೆರಿಕದ ಷೇರು ದಲ್ಲಾಳಿ ಸಂಸ್ಥೆ ಗೋಲ್ಡ್‌ಮನ್‌ ಸ್ಯಾಚ್ಸ್‌ ಹೇಳಿದೆ.

2019–20ರ ಹಣಕಾಸು ವರ್ಷದಲ್ಲಿ ಯಾವುದೇ ಪಿಡುಗು ಇಲ್ಲದೇ ಜಿಡಿಪಿಯು ಶೇ 5ರ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಸದ್ಯಕೊರೊನಾ ವೈರಾಣು ಸೃಷ್ಟಿಸಿರುವ ಅಗಾಧ ಸ್ವರೂಪದ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟು ವೃದ್ಧಿ ದರವನ್ನು ಗಮನಾರ್ಹವಾಗಿ ತಗ್ಗಿಸಲಿದೆ. ಸರ್ಕಾರದ ಇದುವರೆಗಿನ ಬೆಂಬಲದ ಹೊರತಾಗಿಯೂ ದೇಶದಾದ್ಯಂತ ಜಾರಿಯಲ್ಲಿ ಇರುವ ಲಾಕ್‌ಡೌನ್‌ ಕಾರಣಕ್ಕೆ ಆರ್ಥಿಕ ಚಟುವಟಿಕೆಗಳು ಮುಂಬರುವ ತ್ರೈಮಾಸಿಕದಲ್ಲಿ ಗಮನಾರ್ಹವಾಗಿ ಕುಂಠಿತಗೊಳ್ಳಲಿವೆ.

ಜನರಲ್ಲಿ ಭಯದ ಭಾವನೆ ಮನೆ ಮಾಡಿರುವುದರಿಂದ ಈ ಹಿಂದಿನ ಜಿಡಿಪಿ ಕುಸಿತಕ್ಕೆ ಹೋಲಿಸಿದರೆ ಈ ಬಾರಿಯ ಕುಸಿತವು ಸಂಪೂರ್ಣವಾಗಿ ಭಿನ್ನವಾಗಿರಲಿದೆ. ಜಿಡಿಪಿಗೆ ಶೇ 60ರಷ್ಟು ಕೊಡುಗೆ ನೀಡುವ ಸರಕು ಮತ್ತು ಸೇವೆಗಳ ಬೇಡಿಕೆ ಹಾಗೂ ಬಳಕೆಯು ಲಾಕ್‌ಡೌನ್‌ನಿಂದಾಗಿ ತೀವ್ರವಾಗಿ ಬಾಧಿತವಾಗಲಿದೆ. ಕೊರೊನಾ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ನೀತಿ ನಿರೂಪಕರು ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿಲ್ಲ ಎಂದೂ ಗೋಲ್ಡ್‌ಮನ್‌ ಸ್ಯಾಚ್ಸ್‌ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.