ADVERTISEMENT

ಐಎಲ್‌ಆ್ಯಂಡ್‌ಎಫ್‌ಎಸ್‌ ವಂಚನೆಹಲವರ ವಿರುದ್ಧ ಆರೋಪ ಪಟ್ಟಿ

ಗಂಭೀರ ವಂಚನೆ ತನಿಖಾ ಕಚೇರಿ ಕ್ರಮ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 18:42 IST
Last Updated 2 ಜೂನ್ 2019, 18:42 IST
ಮುಂಬೈನಲ್ಲಿನ ಪ್ರಧಾನ ಕಚೇರಿ
ಮುಂಬೈನಲ್ಲಿನ ಪ್ರಧಾನ ಕಚೇರಿ   

ನವದೆಹಲಿ (ಪಿಟಿಐ): ದೀರ್ಘಾವಧಿಯ ಮೂಲಸೌಕರ್ಯ ಯೋಜನೆಗಳಿಗೆ ಸಾಲ ನೀಡುವ ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆ್ಯಂಡ್‌ ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿನ (ಐಎಲ್‌ಆ್ಯಂಡ್‌ಎಫ್‌ಎಸ್‌) ಬಹುಕೋಟಿ ವಂಚನೆ ಪ್ರಕರಣ ಸಂಬಂಧ, ಗಂಭೀರ ಅಪರಾಧ ತನಿಖಾ ಕಚೇರಿಯು (ಎಸ್‌ಎಫ್‌ಐಒ) ಅನೇಕರ ವಿರುದ್ಧ ಮೊದಲ ಆರೋಪ ಪಟ್ಟಿ ಸಲ್ಲಿಸಿದೆ.

ನಿಯಮಗಳನ್ನು ಉಲ್ಲಂಘಿಸಿದ ಮತ್ತು ವಂಚನೆ ಕೃತ್ಯ ಎಸಗಿದ 30 ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಮುಂಬೈನಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಈ ಆರೋಪ ಪಟ್ಟಿ ದಾಖಲಿಸಲಾಗಿದೆ. ಕೆಲ ಆರೋಪಿಗಳು ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಐಎಲ್‌ಆ್ಯಂಡ್‌ಎಫ್‌ಎಸ್‌ ಸಮೂಹದ ಹಣಕಾಸು ಸೇವಾ ಅಂಗಸಂಸ್ಥೆಯಾಗಿರುವ ಐಎಲ್ಆ್ಯಂಡ್‌ಎಫ್‌ಎಸ್‌ ಫೈನಾನ್ಶಿಯಲ್‌ ಸರ್ವಿಸಸ್‌ನಲ್ಲಿನ (ಐಎಫ್‌ಐಎನ್‌) ಅನೇಕರು ಲೆಕ್ಕ ತಪಾಸಿಗರು, ಸ್ವತಂತ್ರ ನಿರ್ದೇಶಕರ ಜತೆ ಸೇರಿ ವಂಚಕರ ಕೂಟ ರಚಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ದೂರಲಾಗಿದೆ.

ADVERTISEMENT

‘ಐಎಫ್‌ಐಎನ್‌’ ಮಾಜಿ ಕಾರ್ಯನಿರ್ವಾಹಕರು ಮತ್ತು ಸ್ವತಂತ್ರ ನಿರ್ದೇಶಕರು ಮತ್ತು ಇತರರ ಚರ ಮತ್ತು ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. 400 ಸಂಸ್ಥೆಗಳ ಖಾತೆಗಳ ಪರಿಶೀಲನೆ, ಕಂಪ್ಯೂಟರ್‌ಗಳಿಂದ ಸಂಗ್ರಹಿಸಿದ ಲೆಕ್ಕಪತ್ರ ಮತ್ತಿತರ ದತ್ತಾಂಶ, ಇ–ಮೇಲ್‌ ಮಾಹಿತಿ, ಆರ್‌ಬಿಐ ತಪಾಸಣಾ ವರದಿ, ಸಭಾ ನಡಾವಳಿ, ಸರ್ಕಾರ ನೇಮಿಸಿದ ಹೊಸ ಮಂಡಳಿಯ ವರದಿ ಮತ್ತಿತರ ದಾಖಲೆಗಳನ್ನು ಆಧರಿಸಿ ಈ ಆರೋಪ ಪಟ್ಟಿ ದಾಖಲಿಸಲಾಗಿದೆ.

ಕಂಪನಿಯ, ಷೇರುದಾರರ, ಸಾಲಗಾರರ ಹಿತಾಸಕ್ತಿಗೆ ಧಕ್ಕೆ ಒದಗಿಸುವ ದುರುದ್ದೇಶದಿಂದಲೇ ‘ಐಎಫ್‌ಐಎನ್‌’ ಉನ್ನತ ಅಧಿಕಾರಿಗಳು ವಂಚನೆ ಎಸಗಿದ್ದಾರೆ.

ಶಾಸನಬದ್ಧ ಲೆಕ್ಕಪತ್ರ ತಪಾಸಿಗರೂ ಈ ವಂಚನೆಯಲ್ಲಿ ಕೈಜೋಡಿಸಿದ್ದಾರೆ. ಆರೋಪಿಗಳು ತಮ್ಮ ಕೃತ್ಯಗಳನ್ನು ಪುನರಾವರ್ತಿಸಿ ಸಾಲಗಳನ್ನು ವಸೂಲಾಗದ ಸಾಲ ಎಂದು ವರ್ಗೀಕರಿಸಿ ಅಥವಾ ಖಾತೆ ವಜಾ ಮಾಡುತ್ತಿದ್ದರು. ಇದರಿಂದ ಸಂಸ್ಥೆಗೆ ದೊಡ್ಡ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.