ADVERTISEMENT

ಆರ್ಥಿಕತೆ ಹೆಚ್ಚಿನ ಕೊಡುಗೆ ನೀಡುವ 8 ರಾಜ್ಯಗಳಿಗೆ ಹಾನಿ

ಪಿಟಿಐ
Published 19 ಮೇ 2020, 19:45 IST
Last Updated 19 ಮೇ 2020, 19:45 IST

ಮುಂಬೈ: ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 60ರಷ್ಟು ಕೊಡುಗೆ ನೀಡುತ್ತಿರುವ 8 ರಾಜ್ಯಗಳು ಕೋವಿಡ್‌–19ನಿಂದ ಅತಿ ಹೆಚ್ಚು ಹಾನಿಗೆ ಗುರಿಯಾಗಿವೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.

ಲಾಕ್‌ಡೌನ್‌ನಿಂದಾಗಿಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಹೆಚ್ಚು ಬಾಧಿತವಾಗಿವೆ. ಉದ್ಯೋಗ ಸೃಷ್ಟಿಯಲ್ಲಿ ಈ ರಾಜ್ಯಗಳ ಕೊಡುಗೆ ಶೇ 58ರಷ್ಟಿದೆ ಎಂದು ತಿಳಿಸಿದೆ.

ಲಾಕ್‌ಡೌನ್‌ ಅವಧಿಯನ್ನು ಮೇ 31ರವರೆಗೂ ವಿಸ್ತರಿಸಲಾಗಿದ್ದು, ವಲಯವಾರು ನಿಯಮ ಸಡಿಲಿಸುವ ನಿರ್ಧಾರವನ್ನು ರಾಜ್ಯಗಳಿಗೆ ನೀಡಲಾಗಿದೆ.ಆದರೆ, ಈ ರಾಜ್ಯಗಳಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಹೀಗಾಗಿ ಮಹಾರಾಷ್ಟ್ರ ಒಳಗೊಂಡು ಅತಿ ಹೆಚ್ಚು ಬಾಧಿತ ರಾಜ್ಯಗಳಲ್ಲಿ ಕೆಲವು ರಾಜ್ಯಗಳು ನಿರ್ಬಂಧವನ್ನು ಈ ತಿಂಗಳ ಅಂತ್ಯದವರೆಗೂ ಮುಂದುವರಿಸಲು ನಿರ್ಧರಿಸಿವೆ.

ADVERTISEMENT

ಮಹಾರಾಷ್ಟ್ರ, ತಮಿಳುನಾಡು ಮತ್ತು ಗುಜರಾತ್‌ ರಾಜ್ಯಗಳು ಕೈಗಾರಿಕೆ ಮತ್ತು ಸೇವೆಗಳ ವರಮಾನದ ಮೇಲೆ ಅವಲಂಬಿತವಾಗಿವೆ. ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಪೆಟ್ರೋಲಿಯಂ, ಮದ್ಯ ಮತ್ತು ಸ್ಟ್ಯಾಂಪ್‌ ಶುಲ್ಕದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸಿರುವುದರಿಂದ ವರಮಾನಕ್ಕೆ ಪೆಟ್ಟು ಬಿದ್ದಿದೆ.

ಕೃಷಿಯ ಮೇಲೆ ಹೆಚ್ಚು ಅವಲಂಬಿತ ರಾಜ್ಯಗಳಾದ ಆಂಧ್ರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ವಾಡಿಕೆಯಂತೆ ಸಾಮಾನ್ಯ ಮಳೆಯಾದರೆ ಪರಿಸ್ಥಿತಿ ತಕ್ಕ ಮಟ್ಟಿಗೆ ಸುಧಾರಿಸುವ ನಿರೀಕ್ಷೆ ಇದೆ.

ಕಡಿಮೆ ಬಾಧಿತ ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧದಿಂದ ಕೈಗಾರಿಕೆ ಮತ್ತು ಸೇವೆಗಳ ಮೇಲೆ ಹೆಚ್ಚಿನ ಅವಲಂಬನೆ ಇರುವ ಕರ್ನಾಟಕ ಮತ್ತು ಕೇರಳದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.