ADVERTISEMENT

ಕ್ರೆಡಾಯ್‌’: 19ರಿಂದ ರಿಯಾಲ್ಟಿ ಎಕ್ಸ್‌ಪೊ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:53 IST
Last Updated 16 ಅಕ್ಟೋಬರ್ 2019, 19:53 IST

ಬೆಂಗಳೂರು: ಭಾರ­ತೀಯ ರಿಯಲ್‌ ಎಸ್ಟೇಟ್‌ ನಿರ್ಮಾಣ­ಗಾ­ರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಬೆಂಗಳೂರು ಘಟಕದ ಆಶ್ರಯದಲ್ಲಿ ವಸತಿ ಯೋಜನೆಗಳ ಎರಡು ದಿನಗಳ ಪ್ರದರ್ಶನ ಇದೇ 19ರಿಂದ ನಗರದಲ್ಲಿ ನಡೆಯಲಿದೆ.

‘ಮಾರತಹಳ್ಳಿಯ ರ‍್ಯಾಡಿಸನ್‌ ಬ್ಲ್ಯೂದಲ್ಲಿ (ಪಾರ್ಕ್‌ ಪ್ಲಾಜಾ) ಶನಿವಾರ ಮತ್ತು ಭಾನುವಾರ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 34 ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಮತ್ತು 6 ಹಣಕಾಸು ಸಂಸ್ಥೆಗಳು ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಸ್ಥಳದಲ್ಲಿಯೇ ಬುಕಿಂಗ್‌ ಮಾಡಿದವರೆಗೆ ಲಕ್ಕಿ ಡ್ರಾ ಮೂಲಕ ನಿಸಾನ್‌ ಕಂಪನಿ ಡಾಟ್ಸನ್‌ ಗೊ ಗೆಲ್ಲುವ ಅವಕಾಶ ಇದೆ’ ಎಂದು ರಿಯಾಲ್ಟಿ ಎಕ್ಸ್‌ಪೊ ಸಮಿತಿಯ ಅಧ್ಯಕ್ಷ ಸಯ್ಯದ್ ಫೈಸಲ್‌ ರವಿ ಅವರು ಮಾಹಿತಿ ನೀಡಿದರು.

‘ಇತರ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ವಸತಿ ಯೋಜನೆಗಳ ಬೆಲೆಗಳು ಸ್ಥಿರವಾಗಿರುವುದರಿಂದ ಮನೆ, ಅಪಾರ್ಟ್‌ಮೆಂಟ್‌ ಖರೀದಿಗೆ ಇದು ಸೂಕ್ತ ಸಮಯವಾಗಿದೆ’ ಎಂದು ಕ್ರೆಡಾಯ್‌ ಬೆಂಗಳೂರಿನ ಅಧ್ಯಕ್ಷ ಕಿಶೋರ್‌ ಜೈನ್‌ ತಿಳಿಸಿದರು.

ADVERTISEMENT

2018ರ ಮೊದಲಾರ್ಧಕ್ಕೆಹೋಲಿಸಿದರೆ 2019ರ ಮೊದಲಾರ್ಧದಲ್ಲಿನ ಮನೆಗಳ ಮಾರಾಟವು ಶೇ 3ರಷ್ಟು ಹೆಚ್ಚಾಗಿದ್ದು 17,500ಕ್ಕೆ ತಲುಪಿದೆ. 2018ರಲ್ಲಿ ಒಟ್ಟಾರೆ 35 ಸಾವಿರ ಮನೆಗಳು ಮಾರಾಟವಾಗಿವೆ. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಮಾರಾಟದ ನಿರೀಕ್ಷೆಯಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.

‘ಬೆಂಗಳೂರಿನಲ್ಲಿ 1.03 ಲಕ್ಷ ಮನೆಗಳು ಮಾರಾಟವಾಗದೇ ಬಾಕಿ ಉಳಿದಿವೆ. ಇದರಲ್ಲಿ ವಾಸಕ್ಕೆ ಸಿದ್ಧವಿರುವ ಮನೆಗಳ ಸಂಖ್ಯೆ 4 ಸಾವಿರಕ್ಕಿಂತಲೂ ಕಡಿಮೆ ಇದೆ. ಮೂರು ವರ್ಷಗಳಲ್ಲಿ ಎಲ್ಲವೂ ಮಾರಾಟವಾಗಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.