ADVERTISEMENT

ಕ್ರಿಪ್ಟೋಕರೆನ್ಸಿ ಎಂದಿಗೂ ಕಾನೂನುಬದ್ಧ ಆಗುವುದಿಲ್ಲ: ಹಣಕಾಸು ಕಾರ್ಯದರ್ಶಿ

ಪಿಟಿಐ
Published 3 ಫೆಬ್ರುವರಿ 2022, 15:41 IST
Last Updated 3 ಫೆಬ್ರುವರಿ 2022, 15:41 IST
ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್
ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್   

ನವದೆಹಲಿ: ಕ್ರಿಪ್ಟೋಕರೆನ್ಸಿ ಎಂದಿಗೂ ಕಾನೂನುಬದ್ಧ ಆಗುವುದಿಲ್ಲ ಎಂದು ಹೇಳುವ ಮೂಲಕ ಕೇಂದ್ರದ ಹಣಕಾಸು ಕಾರ್ಯದರ್ಶಿ ಟಿ ವಿ ಸೋಮನಾಥನ್ ಅವರು ಗುರುವಾರ ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆಯ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

2022-23ರ ಬಜೆಟ್ ವರ್ಚುವಲ್ ಡಿಜಿಟಲ್ ಸ್ವತ್ತುಗಳ ತೆರಿಗೆಯ ಬಗ್ಗೆ ಸ್ಪಷ್ಟತೆಯನ್ನು ನೀಡಿದೆ ಮತ್ತು ಕ್ರಿಪ್ಟೋ ವಹಿವಾಟುಗಳಿಂದ ಗಳಿಸಿದ ಲಾಭಗಳ ಮೇಲೆ ಶೇಕಡ 30 ರಷ್ಟು ತೆರಿಗೆಯನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಸೋಮನಾಥನ್, ಚಿನ್ನ ಮತ್ತು ವಜ್ರದಂತೆಯೇ ಮೌಲ್ಯಯುತವಾಗಿದ್ದರೂ ಸಹ ಕ್ರಿಪ್ಟೋಕರೆನ್ಸಿ ಕಾನೂನುಬದ್ಧವಲ್ಲ, ಖಾಸಗಿ ಕ್ರಿಪ್ಟೋಕರೆನ್ಸಿಗಳು ಎಂದಿಗೂ ಕಾನೂನುಬದ್ಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಕ್ರಿಪ್ಟೋ ಎಂದಿಗೂ ಕಾನೂನುಬದ್ಧ ವಹಿವಾಟು ಆಗುವುದಿಲ್ಲ. ಕಾನೂನುಬದ್ಧ ಎಂದರೆ ಕಾನೂನಿನ ಮೂಲಕ ಸಾಲಗಳ ಇತ್ಯರ್ಥದಲ್ಲಿ ಅದನ್ನು ಸ್ವೀಕರಿಸಲಾಗುತ್ತದೆ. ಭಾರತವು ಯಾವುದೇ ಕ್ರಿಪ್ಟೋ ಆಸ್ತಿಯನ್ನು ಕಾನೂನುಬದ್ಧವಾಗಿ ಮಾಡುವುದಿಲ್ಲ. ಭಾರತದಲ್ಲಿ ರಿಸರ್ವ್ ಬ್ಯಾಂಕಿನ 'ಡಿಜಿಟಲ್ ರೂಪಾಯಿ' ಮಾತ್ರ ಕಾನೂನುಬದ್ಧ ಆಗಿರುತ್ತದೆ’ಸೋಮನಾಥನ್ ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾನೂನುಬದ್ಧಗೊಂಡ ಬಿಟ್‌ಕಾಯಿನ್ ಎಲ್ ಸಾಲ್ವಡಾರ್ ಹೊರತುಪಡಿಸಿ, ಬೇರೆ ಯಾವುದೇ ದೇಶವು ಕ್ರಿಪ್ಟೋವನ್ನು ಕಾನೂನು ಟೆಂಡರ್ ಆಗಿ ಮಾಡಿಲ್ಲ.

ಭಾರತವು ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸಲು ಶಾಸನ ರಚನೆಗೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಈವರೆಗೆ ಯಾವುದೇ ಕರಡನ್ನು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿಲ್ಲ.

ಈ ಮಧ್ಯೆ, ರಿಸರ್ವ್ ಬ್ಯಾಂಕ್ ಬೆಂಬಲಿತ ಡಿಜಿಟಲ್ ಕರೆನ್ಸಿಯು ಅಗ್ಗದ, ಹೆಚ್ಚು ಪರಿಣಾಮಕಾರಿ ಕರೆನ್ಸಿ ನಿರ್ವಹಣೆಯನ್ನು ಪ್ರಾರಂಭಿಸಲು ಮುಂದಿನ ಹಣಕಾಸು ವರ್ಷದಲ್ಲಿ ಚಲಾವಣೆಗೊಳ್ಳಲಿದೆ.

ಏಪ್ರಿಲ್ 1 ರಿಂದ, ಕ್ರಿಪ್ಟೋಕರೆನ್ಸಿಗಳ ಆದಾಯದ ಮೇಲೆ 30 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಫಾರ್ಮ್ ಕ್ರಿಪ್ಟೋದಿಂದ ಲಾಭಗಳನ್ನು ಘೋಷಿಸಲು ಪ್ರತ್ಯೇಕ ಕಾಲಮ್ ಅನ್ನು ಹೊಂದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.