ADVERTISEMENT

ಬ್ಯಾಡ್ ಬ್ಯಾಂಕ್‌ ರಚನೆಗೆ ಮುಂದಡಿ, ₹ 30 ಸಾವಿರ ಕೋಟಿ ನಿಗದಿ

ಅನ್ನಪೂರ್ಣ ಸಿಂಗ್
Published 16 ಸೆಪ್ಟೆಂಬರ್ 2021, 16:01 IST
Last Updated 16 ಸೆಪ್ಟೆಂಬರ್ 2021, 16:01 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲವನ್ನು ತಾನು ವಹಿಸಿಕೊಳ್ಳುವ ‘ಬ್ಯಾಡ್‌ ಬ್ಯಾಂಕ್‌’ ಅಥವಾ ‘ರಾಷ್ಟ್ರೀಯ ಆಸ್ತಿ ಪುನರ್‌ರಚನಾ ಕಂಪನಿ ಲಿಮಿಟೆಡ್‌’ (ಎನ್‌ಎಆರ್‌ಸಿಎಲ್‌) ಸ್ಥಾಪನೆಗೆ ಕೇಂದ್ರ ಸರ್ಕಾರವು ಹಸಿರು ನಿಶಾನೆ ತೋರಿದೆ. ಬ್ಯಾಡ್‌ ಬ್ಯಾಂಕ್‌ನಿಂದಾಗಿ ಸಾಂಪ್ರದಾಯಿಕ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ತಗ್ಗಿ, ಹೊಸ ಸಾಲ ನೀಡಲು ಹೆಚ್ಚು ಬಂಡವಾಳ ಲಭ್ಯವಾಗುವ ನಿರೀಕ್ಷೆ ಇದೆ.

ಬ್ಯಾಡ್‌ ಬ್ಯಾಂಕ್‌ಗೆ ಖಾತರಿ ರೂಪದಲ್ಲಿ ಕೇಂದ್ರ ಸರ್ಕಾರದಿಂದ ₹ 30,600 ಕೋಟಿ ನಿಗದಿ ಮಾಡಲು ಕೂಡ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಯಾಡ್‌ ಬ್ಯಾಂಕ್ ರಚಿಸುವ ಘೋಷಣೆಯನ್ನು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮಾಡಲಾಗಿತ್ತು.

ADVERTISEMENT

‘ಬ್ಯಾಂಕ್‌ಗಳಲ್ಲಿನ ಎನ್‌ಪಿಎಗಳನ್ನು ತಾನು ವಹಿಸಿಕೊಂಡು, ಅವುಗಳನ್ನು ವೃತ್ತಿಪರವಾಗಿ ಇತ್ಯರ್ಥಪಡಿಸುವ ಕೆಲಸವನ್ನು ಬ್ಯಾಡ್ ಬ್ಯಾಂಕ್ ಮಾಡಲಿದೆ. ಇದರಿಂದಾಗಿ ಸಾಂಪ್ರದಾಯಿಕ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ತಗ್ಗಲಿದೆ’ ಎಂದು ನಿರ್ಮಲಾ ಅವರು ವಿವರಿಸಿದರು. ವಸೂಲಾಗದ ಸಾಲವನ್ನು ವಹಿಸಿಕೊಳ್ಳುವ ಸಂದರ್ಭದಲ್ಲಿ ಬ್ಯಾಡ್‌ ಬ್ಯಾಂಕ್‌, ಸಾಂಪ್ರದಾಯಿಕ ಬ್ಯಾಂಕ್‌ಗೆ ಸಾಲದ ಶೇಕಡ 15ರಷ್ಟು ಮೊತ್ತವನ್ನು ನಗದು ರೂಪದಲ್ಲಿ ನೀಡುತ್ತದೆ. ಇನ್ನುಳಿದ ಶೇಕಡ 85ರಷ್ಟು ಮೊತ್ತವನ್ನು ಸರ್ಕಾರದ ಖಾತರಿ ಇರುವ ಭದ್ರತಾ ಪತ್ರದ ರೂಪದಲ್ಲಿ ನೀಡಲಾಗುತ್ತದೆ.

ಬ್ಯಾಡ್‌ ಬ್ಯಾಂಕ್‌ ಮೂಲಕ ₹ 500 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲಗಳನ್ನು ಇತ್ಯರ್ಥಪಡಿಸುವ ಉದ್ದೇಶ ಇದೆ. ಒಟ್ಟು ₹ 2 ಲಕ್ಷ ಕೋಟಿ ಮೌಲ್ಯದ ಸಾಲವನ್ನು ಹಂತ ಹಂತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಮೊದಲ ಹಂತದಲ್ಲಿ ಒಟ್ಟು ₹ 90 ಸಾವಿರ ಕೋಟಿ ಮೌಲ್ಯದ ಸಾಲವನ್ನು ಬ್ಯಾಡ್‌ ಬ್ಯಾಂಕ್‌ಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.

‘ಬ್ಯಾಡ್‌ ಬ್ಯಾಂಕ್‌ಗೆ ಸರ್ಕಾರದ ಕಡೆಯಿಂದ ಖಾತರಿ ಮೊತ್ತವನ್ನು ನಿಗದಿ ಮಾಡಿರುವುದು ಮಹತ್ವದ ತೀರ್ಮಾನ. ಇದು ಸಾಂಪ್ರದಾಯಿಕ ಬ್ಯಾಂಕ್‌ಗಳಿಗೆ ತ್ವರಿತವಾಗಿ ತೀರ್ಮಾನ ಕೈಗೊಳ್ಳಲು ನೆರವು ನೀಡಲಿದೆ. ಎನ್‌ಪಿಎ ಮೊತ್ತವನ್ನು ಗಮನಿಸಿದರೆ ಸರ್ಕಾರವು ಈಗ ನಿಗದಿ ಮಾಡಿರುವ ಮೊತ್ತವು ಸಾಕಾಗುವುದಿಲ್ಲ. ಆದರೆ ಸರ್ಕಾರದ ಹಣಕಾಸಿನ ಮಿತಿಗಳ ಕಾರಣದಿಂದಾಗಿ ಇಷ್ಟು ಮೊತ್ತ ನಿಗದಿಯಾಗಿದೆ’ ಎಂದು ರಿಸರ್ಜೆಂಟ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿಪ್ರಕಾಶ್ ಗಾಡಿಯಾ ಅಭಿಪ್ರಾಯ ವ್ಯಕ್ತಪಡಿಸಿದರು.

ಅಸೋಚಾಂ–ಕ್ರಿಸಿಲ್ ಅಧ್ಯಯನದ ಪ್ರಕಾರ ದೇಶದ ಬ್ಯಾಂಕ್‌ಗಳ ಎನ್‌ಪಿಎ ಮೊತ್ತವು ಮುಂದಿನ ವರ್ಷದ ಮಾರ್ಚ್‌ ವೇಳೆಗೆ ₹ 10 ಲಕ್ಷ ಕೋಟಿಯನ್ನು ದಾಟಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.