ನವದೆಹಲಿ: ಜಿಎಸ್‌ಟಿ ದರ ಪರಿಷ್ಕರಣೆ ನಂತರದಲ್ಲಿ ಅದಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರವು ‘ಇನ್‌ಗ್ರಾಂ’ ಪೋರ್ಟಲ್‌ನಲ್ಲಿ ಪ್ರತ್ಯೇಕ ವಿಭಾಗವನ್ನು ಆರಂಭಿಸಿದೆ.
ಜಿಎಸ್‌ಟಿ ಮಂಡಳಿಯ ನಿರ್ಧಾರದಂತೆ ಪರಿಷ್ಕೃತ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಇದರ ಸಮರ್ಪಕ ಜಾರಿಗಾಗಿ ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಎಚ್) ಜೊತೆ ಕೈ ಜೋಡಿಸಿ, ವಿವಿಧ ಕ್ರಮ ಕೈಗೊಂಡಿದೆ ಎಂದು ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ.
ಜಿಎಸ್‌ಟಿ ಪರಿಷ್ಕೃತ ದರ, ವಿನಾಯಿತಿ ಜಾರಿಗೆ ಸಂಬಂಧಿಸಿ ಗ್ರಾಹಕರ ದೂರುಗಳನ್ನು ಎನ್‌ಸಿಎಚ್‌ನ ಸಮಗ್ರ ಕುಂದುಕೊರತೆ ಪರಿಹಾರ ಪೋರ್ಟಲ್‌ನಲ್ಲಿ (ಐಎನ್‌ಜಿಆರ್‌ಎಎಂ) ದಾಖಲಿಸಬಹುದು.
ಗ್ರಾಹಕರು ನೀಡಿದ ದೂರನ್ನು ಸಂಬಂಧಿತ ಕಂಪನಿಗಳು, ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿ (ಸಿಬಿಐಸಿ) ಮತ್ತು ಇತರೆ ಸಂಬಂಧಿತ ಪ್ರಾಧಿಕಾರಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ.
ಕನ್ನಡ ಸೇರಿದಂತೆ 17 ಭಾಷೆಗಳಲ್ಲಿ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ (1915) ಕರೆ ಮಾಡುವ ದೂರು ಸಲ್ಲಿಸಬಹುದಾಗಿದೆ ಅಥವಾ ಐಎನ್‌ಜಿಆರ್‌ಎಎಂ ಮೂಲಕ ದೂರು ನೀಡಬಹುದಾಗಿದೆ. ಜೊತೆಗೆ ವಾಟ್ಸ್‌ಆ್ಯಪ್, ಎಸ್‌ಎಂಎಸ್, ಇ–ಮೇಲ್, ಎಚ್‌ಸಿಎಚ್ ಆ್ಯಪ್, ವೆಬ್‌ಪೋರ್ಟಲ್ ಮತ್ತು ಉಮಂಗ್ ಆ್ಯಪ್ ಮೂಲಕ ಗ್ರಾಹಕರು ದೂರು ನೀಡಬಹುದಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ನೇತೃತ್ವದಲ್ಲಿ ಪ್ರಮುಖ ಇ–ಕಾಮರ್ಸ್ ವೇದಿಕೆಗಳು, ಕೈಗಾರಿಕಾ ಸಂಘಟನೆಗಳು ಮತ್ತು ಗ್ರಾಹಕ ಬಳಕೆ ವಸ್ತುಗಳ ಕಂಪನಿಗಳ ಪ್ರತಿನಿಧಿಗಳ ಜೊತೆ ಸೆಪ್ಟೆಂಬರ್ 17ರಂದು ಸಭೆ ನಡೆದಿದೆ. ಈ ವೇಳೆ ಜಿಎಸ್‌ಟಿ ಪರಿಷ್ಕರಣೆ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.