ADVERTISEMENT

ಪೆಟ್ರೋಲ್‌ಗಿಂತ ಡೀಸೆಲ್‌ ದುಬಾರಿ

ದೇಶದಾದ್ಯಂತ ಸತತ 18ನೇ ದಿನವೂ ದರ ಏರಿಕೆ ಮಾಡಿದ ತೈಲ ಕಂಪನಿಗಳು

ಏಜೆನ್ಸೀಸ್
Published 24 ಜೂನ್ 2020, 22:31 IST
Last Updated 24 ಜೂನ್ 2020, 22:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇತ್ತೀಚಿನ ದಿನಗಳಲ್ಲಿನ ನಿರಂತರ ಬೆಲೆ ಏರಿಕೆಯ ಫಲವಾಗಿ ಡೀಸೆಲ್‌ ಬೆಲೆಯು ಮೊದಲ ಬಾರಿಗೆ ಪೆಟ್ರೋಲ್‌ಗಿಂತ ದುಬಾರಿಯಾಗಿ ಪರಿಣಮಿಸಿದೆ.

18ನೇ ದಿನವೂ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 48 ಪೈಸೆಗಳಂತೆ ಹೆಚ್ಚಳ ಮಾಡಿರುವುದರಿಂದ ರಾಜಧಾನಿ ದೆಹಲಿಯಲ್ಲಿ ಡೀಸೆಲ್‌ ಬೆಲೆ ₹ 79.88ಕ್ಕೆ ಏರಿಕೆಯಾಗಿದೆ. ಡೀಸೆಲ್‌ ಜತೆ ಪೆಟ್ರೋಲ್‌ ಬೆಲೆಯನ್ನು ಬುಧವಾರ ಏರಿಕೆ ಮಾಡಿಲ್ಲ. ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ₹ 79.76ರಲ್ಲಿದೆ.

ಸಾಮಾನ್ಯವಾಗಿ ಪ್ರತಿ ಲೀಟರ್‌ ಡೀಸೆಲ್‌ ಮಾರಾಟ ಬೆಲೆಯು ಪೆಟ್ರೋಲ್‌ ಬೆಲೆಗಿಂತ ₹ 18 ರಿಂದ ₹ 20ರವರೆಗೆ ಕಡಿಮೆ ಮಟ್ಟದಲ್ಲಿ ಇರುತ್ತಿತ್ತು. ವರ್ಷಗಳಿಂದ ಇಂಧನಗಳ ಮೇಲಿನ ಎಕ್ಸೈಸ್‌ ಡ್ಯೂಟಿ ಮತ್ತು ‘ವ್ಯಾಟ್‌’ ದರ ಹೆಚ್ಚಳವಾಗಿರುವುದರಿಂದ ಎರಡೂ ಇಂಧನಗಳ ಬೆಲೆ ನಡುವಣ ವ್ಯತ್ಯಾಸವು ಗಮನಾರ್ಹ ಕುಸಿತ ಕಾಣುತ್ತ ಬಂದಿದೆ.

ADVERTISEMENT

ಈ ತಿಂಗಳ 7ರಿಂದ ಆರಂಭವಾದ ಇಂಧನಗಳ ದಿನನಿತ್ಯದ ಬೆಲೆ ಪರಿಷ್ಕರಣೆಯು ಸತತ 18 ದಿನಗಳಲ್ಲಿ ಮುಂದುವರೆದಿದೆ. ಇದರಿಂದಾಗಿ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ₹ 10.49 ಮತ್ತು ಪೆಟ್ರೋಲ್‌ ₹ 8.5ರಷ್ಟು ತುಟ್ಟಿಯಾಗಿದೆ.

2017ರ ಮೇನಿಂದೀಚೆಗೆ ಪ್ರತಿ ದಿನ ಬೆಲೆ ಪರಿಷ್ಕರಣೆ ಜಾರಿಗೆ ಬಂದಿದೆ. ಇದುವರೆಗಿನ ಅವಧಿಯಲ್ಲಿ 15 ದಿನಗಳ ಏರಿಕೆಯು ಪ್ರತಿ ಲೀಟರ್‌ಗೆ ಗರಿಷ್ಠ ₹ 4 ರಿಂದ ₹ 5ರ ಆಸುಪಾಸಿನಲ್ಲಿ ಇರುತ್ತಿತ್ತು. ಈ ಬಾರಿ ಅದು ದುಪ್ಪಟ್ಟಾಗಿದೆ.

ದೆಹಲಿ ಸರ್ಕಾರವು ಮೇನಲ್ಲಿ ಇಂಧನಗಳ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಹೆಚ್ಚಿಸಿದ್ದರಿಂದ ಡೀಸೆಲ್‌, ಪೆಟ್ರೋಲ್‌ಗಿಂತ ದುಬಾರಿಯಾಗಿದೆ. ಮೇನಲ್ಲಿ ಡೀಸೆಲ್‌ ಮೇಲಿನ ‘ವ್ಯಾಟ್‌‘ ಅನ್ನು ಶೇ 16.75 ರಿಂದ ಶೇ 30ರಷ್ಟು ಮತ್ತು ಪೆಟ್ರೋಲ್‌ ಮೇಲೆ ಶೇ 27 ರಿಂದ ಶೇ 30ಕ್ಕೆ ಹೆಚ್ಚಿಸಿತ್ತು. ತೆರಿಗೆ ಪ್ರಮಾಣಕ್ಕೆ ಅನುಗುಣವಾಗಿ ಬೆಲೆ ಹೆಚ್ಚಳವೂ ಏರುಗತಿಯಲ್ಲಿ ಇರಲಿದೆ.

‘ವ್ಯಾಟ್‌’ ಹೊರೆಯಿಂದಾಗಿ ಇಂಧನಗಳ ಬೆಲೆಯು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಸಾಗಾಣಿಕೆ ವೆಚ್ಚ ಪರಿಗಣಿಸಿ ಚಿಲ್ಲರೆ ಮಾರಾಟ ದರವು ಕೆಲ ಪೈಸೆಗಳಲ್ಲಿ ವ್ಯತ್ಯಾಸ ಹೊಂದಿರುತ್ತದೆ.

ಸದ್ಯದ ಬೆಲೆ ಏರಿಕೆಗಿಂತ ಈ ಹಿಂದೆ ಡೀಸೆಲ್‌ ಬೆಲೆಯು 2018ರ ಅಕ್ಟೋಬರ್‌ 16ರಂದು ದೆಹಲಿಯಲ್ಲಿ ಗರಿಷ್ಠ
₹ 75.69ಕ್ಕೆ ತಲುಪಿತ್ತು. ಪೆಟ್ರೋಲ್‌ ಬೆಲೆಯು 2018ರ ಅಕ್ಟೋಬರ್ 4 ರಂದು ₹ 84ಕ್ಕೆ ತಲುಪಿತ್ತು. ಆಗ ಕೇಂದ್ರ ಸರ್ಕಾರ ಎಕ್ಸೈಸ್‌ ಡ್ಯೂಟಿ ಪ್ರತಿ ಲೀಟರ್‌ಗೆ ₹ 1.50 ರಂತೆ ತಗ್ಗಿಸಿತ್ತು. ₹ 1 ಹೊರೆ ಭರಿಸಲು ತೈಲ ಮಾರಾಟ ಕಂಪನಿಗಳಿಗೆ ಸೂಚಿಸಲಾಗಿತ್ತು. ಹೀಗಾಗಿ ಇಂಧನಗಳ ಬೆಲೆ ₹ 2.50ರಷ್ಟು ಅಗ್ಗವಾಗಿತ್ತು. ಇಂಧನಗಳ ಚಿಲ್ಲರೆ ಮಾರಾಟ ದರದಲ್ಲಿ ತೆರಿಗೆ ಪಾಲು ಶೇ 64ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.