
ಬೆಂಗಳೂರು: ‘ಡಿಜಿಟಲ್ ಗೋಲ್ಡ್’ನಲ್ಲಿ ಹೂಡಿಕೆ ಮಾಡುವವರು ಎಚ್ಚರಿಕೆಯಿಂದ ಇರಬೇಕು ಎಂಬ ಕಿವಿಮಾತು ಹೇಳಿರುವ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ), ಬಂಡವಾಳ ಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ಹೂಡಿಕೆದಾರರ ರಕ್ಷಣೆಗೆ ಇರುವ ಯಾವುದೇ ವ್ಯವಸ್ಥೆಗಳು ಈ ಬಗೆಯ ಹೂಡಿಕೆಗಳಿಗೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
‘ಡಿಜಿಟಲ್ ಗೋಲ್ಡ್ ಅಥವಾ ಇ–ಗೋಲ್ಡ್’ ಹೆಸರಿನ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸೆಬಿ ಈ ಕಿವಿಮಾತನ್ನು ಶನಿವಾರ ಹೇಳಿದೆ.
ಕೆಲವು ಡಿಜಿಟಲ್ ಅಥವಾ ಆನ್‌ಲೈನ್ ವೇದಿಕೆಗಳು ‘ಡಿಜಿಟಲ್ ಗೋಲ್ಡ್ ಅಥವಾ ಇ– ಗೋಲ್ಡ್’ ಹೆಸರಿನ ಹೂಡಿಕೆ ಉತ್ಪನ್ನಗಳಲ್ಲಿ ಹಣ ತೊಡಗಿಸಲು ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತಿವೆ. ಇದು ಸೆಬಿ ಗಮನಕ್ಕೆ ಬಂದಿದೆ. ಭೌತಿಕ ಚಿನ್ನದ ಮೇಲಿನ ಹೂಡಿಕೆಗೆ ಡಿಜಿಟಲ್ ಚಿನ್ನ ಪರ್ಯಾಯ ಎಂದು ಅದರ ಬಗ್ಗೆ ಹೇಳಲಾಗುತ್ತಿದೆ.
ಆದರೆ, ಇಂತಹ ಡಿಜಿಟಲ್ ಗೋಲ್ಡ್ ಹೂಡಿಕೆ ಉತ್ಪನ್ನಗಳು ಸೆಬಿ ನಿಯಂತ್ರಿತ ಚಿನ್ನದ ಹೂಡಿಕೆ ಉತ್ಪನ್ನಗಳಿಗಿಂತ ಭಿನ್ನ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಡಿಜಿಟಲ್ ಗೋಲ್ಡ್ ಅಥವಾ ಇ–ಗೋಲ್ಡ್‌ಅನ್ನು ಷೇರು ಅಥವಾ ಸಾಲಪತ್ರದಂತೆ ಅಧಿಸೂಚಿತ ಹೂಡಿಕೆ ಉತ್ಪನ್ನ ಅಲ್ಲ, ಅವುಗಳನ್ನು ಸರಕುಜನ್ಯ ಹೂಡಿಕೆ ಉತ್ಪನ್ನಗಳು ಎಂದು ಕೂಡ ಕಾನೂನಿನ ಅಡಿ ಪರಿಗಣಿಸಿಲ್ಲ ಎಂದು ಸೆಬಿ ವಿವರಿಸಿದೆ.
ಇವು ಸೆಬಿ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗೆ ಇವೆ. ಇಂತಹ ಡಿಜಿಟಲ್ ಗೋಲ್ಡ್ ಉತ್ಪನ್ನಗಳ ಮೇಲಿನ ಹೂಡಿಕೆಯು, ಹೂಡಿಕೆದಾರರ ಪಾಲಿಗೆ ಗಣನೀಯ ಮಟ್ಟದ ಹೂಡಿಕೆ ಅಪಾಯವನ್ನು ಹೊತ್ತುತರುತ್ತವೆ ಎಂದು ಸೆಬಿ ಎಚ್ಚರಿಸಿದೆ.
ಚಿನ್ನದ ಮೇಲೆ ಹಾಗೂ ಚಿನ್ನಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಹೂಡಿಕೆ ಸೆಬಿ ಹಲವು ಮಾರ್ಗಗಳನ್ನು ಕಲ್ಪಿಸಿದೆ. ಮ್ಯೂಚುವಲ್ ಫಂಡ್ ಕಂಪನಿಗಳು ನೀಡುವ ಚಿನ್ನದ ಇಟಿಎಫ್‌ಗಳು, ಷೇರುಪೇಟೆಗಳ ವಹಿವಾಟಿನಲ್ಲಿ ಬಳಸಬಹುದಾದ ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ (ಇಜಿಆರ್) ಅಂತಹ ಕಾನೂನು ಮಾನ್ಯತೆಯ ಉತ್ಪನ್ನಗಳು. ಸೆಬಿ ನೋಂದಾಯಿತ ಮಧ್ಯವರ್ತಿಗಳ ಮೂಲಕ, ಸೆಬಿಯ ನಿಯಂತ್ರಣ ಇರುವ ಇಂತಹ ಉತ್ಪನ್ನಗಳಲ್ಲಿ ಹೂಡಿಕೆ ಮಾಡಬಹುದು, ಇವು ಸೆಬಿ ಹೇಳಿರುವ ಕಾನೂನಿನ ಚೌಕಟ್ಟಿನ ವ್ಯಾಪ್ತಿಗೆ ಬರುತ್ತವೆ ಎಂದು ಪ್ರಕಟಣೆಯು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.