ಕೊಕೇನ್ (ಪ್ರಾತಿನಿಧಿಕ ಚಿತ್ರ)
ನವದೆಹಲಿ: ದೇಶದಲ್ಲಿ 2023–24ನೇ ಸಾಲಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ₹2,242 ಕೋಟಿ ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕೊಕೇನ್ ಕಳ್ಳಸಾಗಣೆ ಪ್ರಮಾಣ ಹೆಚ್ಚಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವರದಿ ತಿಳಿಸಿದೆ.
ಬಾಂಗ್ಲಾದೇಶ ಹಾಗೂ ಮ್ಯಾನ್ಮರ್‌ನಿಂದ ಕಳ್ಳಸಾಗಣೆಯು ಅವ್ಯಾಹತವಾಗಿದೆ. ಮ್ಯಾನ್ಮರ್‌ನಲ್ಲಿ ತಯಾರಾಗುವ ಮೆಥಾಂಫೆಟಮೈನ್ ಹಾಗೂ ಕೆಫಿನ್ ಅಂಶ ಒಳಗೊಂಡಿರುವ ‘ಯಾಬಾ’ ಮಾತ್ರೆಗಳು (ಡ್ರಗ್ಸ್ ಮಾತ್ರೆ) ಗಡಿ ಭಾಗದ ಮೂಲಕ ಭಾರತಕ್ಕೆ ರವಾನೆಯಾಗುತ್ತಿವೆ ಎಂದು ಹೇಳಿದೆ.
ಈ ಮಾತ್ರೆಗಳ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಶದ ಪೂರ್ವದ ಗಡಿ ಭಾಗದ ಪ್ರದೇಶಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.
₹974 ಕೋಟಿ ಮೌಲ್ಯದ 107 ಕೆ.ಜಿ. ಕೊಕೇನ್, ₹365 ಕೋಟಿ ಮೌಲ್ಯದ ಹೆರಾಯಿನ್, ₹275 ಕೋಟಿ ಮೌಲ್ಯದ ಮೆಥಾಂಫೆಟಮೈನ್ ಹಾಗೂ ₹21 ಕೋಟಿ ಮೌಲ್ಯದ 7,249 ಕೆ.ಜಿ ಗಾಂಜಾವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದೆ.
₹178 ಕೋಟಿ ಮೌಲ್ಯದ 9.10 ಕೋಟಿ ವಿದೇಶಿ ಸಿಗರೇಟ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
4869 ಕೆ.ಜಿ. ಚಿನ್ನ ವಶ
2023–24ರಲ್ಲಿ ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ನೇತೃತ್ವದಡಿ ನಡೆದ ಕಾರ್ಯಾಚರಣೆಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 4869 ಕೆ.ಜಿ. ಚಿನ್ನ ವಶಪಡಿಸಿಕೊಂಡಿದೆ. ಇದರಲ್ಲಿ ಡಿಎಐನಿಂದ ವಶಪಡಿಸಿಕೊಂಡಿರುವ 1319 ಕೆ.ಜಿ ಚಿನ್ನವೂ ಸೇರಿದೆ ಎಂದು ವರದಿ ತಿಳಿಸಿದೆ.
ಯುಎಇ ಮತ್ತು ಸೌದಿ ಅರೇಬಿಯಾದಿಂದ ಹೆಚ್ಚಿನ ಪ್ರಮಾಣದ ಚಿನ್ನವು ಭಾರತಕ್ಕೆ ಕಳ್ಳಸಾಗಣೆಯಾಗುತ್ತಿದೆ. ಮುಖ್ಯವಾಗಿ ಬಾಂಗ್ಲಾದೇಶ ಮತ್ತು ಮ್ಯಾನ್ಮರ್ ಗಡಿ ಭಾಗದ ಮೂಲಕ ದೇಶಕ್ಕೆ ರವಾನೆಯಾಗುತ್ತಿದೆ ಎಂದು ಹೇಳಿದೆ. ನೈರೋಬಿ ಅಡಿಸ್ ಅಬಾಬಾ ಹಾಗೂ ತಾಷ್ಕೆಂಟ್ ವಿಮಾನ ನಿಲ್ದಾಣಗಳು ಚಿನ್ನ ಕಳ್ಳಸಾಗಣೆದಾರರ ಪ್ರಮುಖ ನೆಲೆಗಳಾಗಿವೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.