ADVERTISEMENT

ಬರ: ಆಸರೆಯಾದ ಸಿರಿಧಾನ್ಯ

ನವಣೆ, ಸಾವೆ ಬೆಲೆ ಏರಿಕೆ; ರೈತರ ಮೊಗದಲ್ಲಿ ಮಂದಹಾಸ

ಜಿ.ಬಿ.ನಾಗರಾಜ್
Published 14 ಡಿಸೆಂಬರ್ 2018, 18:30 IST
Last Updated 14 ಡಿಸೆಂಬರ್ 2018, 18:30 IST
ಕೆರೆಹೊಸಹಳ್ಳಿಯ ಕೆ.ಆರ್‌. ಚಂದ್ರಶೇಖರ ಪಟೇಲ್‌ ಬೆಳೆದಿರುವ ನವಣೆ
ಕೆರೆಹೊಸಹಳ್ಳಿಯ ಕೆ.ಆರ್‌. ಚಂದ್ರಶೇಖರ ಪಟೇಲ್‌ ಬೆಳೆದಿರುವ ನವಣೆ   

ಚಿತ್ರದುರ್ಗ: ಮಳೆ ಕೊರತೆಯ ಮುನ್ಸೂಚನೆ ಅರಿತು ಸಿರಿಧಾನ್ಯ ಬಿತ್ತಿದ ರೈತರು ಬರದಲ್ಲೂ ಸಮೃದ್ಧ ಬೆಳೆ ಬೆಳೆದಿದ್ದಾರೆ. ಮೆಕ್ಕೆಜೋಳ, ಶೇಂಗಾದಂತಹ ವಾಣಿಜ್ಯ ಬೆಳೆಯಲ್ಲಿ ಉಂಟಾದ ನಷ್ಟವನ್ನು ನವಣೆ, ಸಾವೆಗಳಿಂದ ತುಂಬಿಕೊಂಡಿದ್ದಾರೆ.

ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆದ ಸಿರಿಧಾನ್ಯ ನಿರೀಕ್ಷೆಯಷ್ಟು ಇಳುವರಿ ಬಾರದಿದ್ದರೂ, ರೈತರಿಗೆ ಆಸರೆಯಾಗಿದೆ. ಕಿರುಧಾನ್ಯಗಳಿಗೆ ಕಳೆದ ವರ್ಷಕ್ಕಿಂತ ಉತ್ತಮ ಬೆಲೆ ಸಿಕ್ಕಿರುವುದು ಬರದ ಬೇಗೆಯನ್ನು ನೀಗಿಸಿಕೊಳ್ಳಲು ಸಹಕಾರಿಯಾಗಿದೆ.

ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿ ಸುರಿದಿತ್ತು. ಮೆಕ್ಕೆಜೋಳ, ಈರುಳ್ಳಿ, ಶೇಂಗಾ ಸೇರಿ ಇತರ ವಾಣಿಜ್ಯ ಬೆಳೆಗಳನ್ನು ರೈತರು ಬಿತ್ತಿದ್ದರು. ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಬಿತ್ತನೆಗೂ ಉತ್ತಮ ಹದಮಳೆ ಆಗಲಿಲ್ಲ. ಬರದ ಮುನ್ಸೂಚನೆ ಅರಿತ ಕೃಷಿ ಇಲಾಖೆ, ಪರ್ಯಾಯ ಬೆಳೆಗಳಿಗೆ ಸಲಹೆ ನೀಡಿತ್ತು. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ನವಣೆ ಬಿತ್ತಿದ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.

ADVERTISEMENT

‘ಹತ್ತು ಎಕರೆ ಕೃಷಿ ಜಮೀನಿನ ಪೈಕಿ ಮೂರು ಎಕರೆಯಲ್ಲಿ ನವಣೆ ಹಾಗೂ ಒಂದೂವರೆ ಎಕರೆಯಲ್ಲಿ ಸಾವೆ ಬಿತ್ತಿದೆ. ಆಗಾಗ ಬಿದ್ದ ಅಲ್ಪ ಮಳೆಗೆ ಉತ್ತಮ ಫಸಲು ಬಂದಿದೆ. ಕಾಳು ಕಟ್ಟುವ ಸಮಯದಲ್ಲಿ ಹಿಂಗಾರು ಮಳೆಯೊಂದು ಸುರಿದಿದ್ದರಿಂದ ಅದೃಷ್ಟ ಖುಲಾಯಿಸಿದೆ. ನಿತ್ಯ ಬೀಳುತ್ತಿರುವ ಇಬ್ಬನಿಯ ತೇವಾಂಶದಿಂದಲೇ ಬೆಳೆ ಉತ್ತಮವಾಗಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಹೊಸದುರ್ಗ ತಾಲ್ಲೂಕಿನ ಕೆರೆಹೊಸಹಳ್ಳಿಯ ಕೆ.ಆರ್‌. ಚಂದ್ರಶೇಖರ ಪಟೇಲ್‌.

ವಾರ್ಷಿಕ 400 ಮಿಲಿ ಮೀಟರ್‌ಗಿಂತ ಕಡಿಮೆ ಮಳೆ ಬೀಳುವ ಪ್ರದೇಶವನ್ನು ಒಣಭೂಮಿ ಎಂದು ಕೃಷಿ ಇಲಾಖೆ ಪರಿಗಣಿಸಿದೆ. ಈ ಮುಂಗಾರಿನಲ್ಲಿ ಸರಾಸರಿ 240 ಮಿಲಿ ಮೀಟರ್‌ಗಿಂತಲೂ ಕಡಿಮೆ ಮಳೆ ಸುರಿದಿದೆ. ಜಿಲ್ಲೆಯ 2.78 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಶೇಂಗಾ ಸೇರಿ ಇತರ ಎಲ್ಲ ಬೆಳೆ ನಷ್ಟವಾಗಿದೆ. ಆದರೆ, ಕಿರುಧಾನ್ಯ ಮಾತ್ರ ರೈತರ ಕೈಸೇರಿದೆ.

‘ಮೆಕ್ಕೆಜೋಳ ಹಾಕಿ ಹಲವು ಬಾರಿ ಕೈಸುಟ್ಟುಕೊಂಡಿದ್ದೇವೆ. ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದರೆ ಮಾತ್ರ ಮೆಕ್ಕೆಜೋಳಕ್ಕೆ ಆದ್ಯತೆ ನೀಡುತ್ತೇವೆ. ಸರಿಯಾಗಿ ಮಳೆ ಬಾರದಿರುವುದರಿಂದ ನವಣೆ ಹಾಕಿದೆವು. ಇಳುವರಿ ಕೊಂಚ ಕಡಿಮೆಯಾದರೂ, ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ₹ 1,600ಕ್ಕೆ ಮಾರಾಟವಾಗಿದ್ದ ಕ್ವಿಂಟಲ್‌ ನವಣೆ, ಈ ವರ್ಷ ₹ 2,600ಕ್ಕೆ ಏರಿಕೆಯಾಗಿದೆ’ ಎನ್ನುತ್ತಾರೆ ರೈತ ಚಂದ್ರಶೇಖರ್‌.

ಹೊಸದುರ್ಗ ತಾಲ್ಲೂಕಿನಲ್ಲಿ ಪ್ರತಿ ವರ್ಷ 50 ಸಾವಿರ ಕ್ವಿಂಟಲ್‌ನಷ್ಟು ಸಾವೆ ಬೆಳೆಯಲಾಗುತ್ತದೆ. ಬರ ಪರಿಸ್ಥಿತಿ ತಲೆದೋರಿದರೂ ಸಾವೆ ಇಳುವರಿ ಕಡಿಮೆಯಾಗಿಲ್ಲ. ಕೃಷಿ ಇಲಾಖೆಯ ಪ್ರಕಾರ ಈ ವರ್ಷ 45 ಸಾವಿರ ಕ್ವಿಂಟಲ್‌ಗೂ ಹೆಚ್ಚು ಸಾವೆ ಬೆಳೆ ಸಿಕ್ಕಿದೆ. ಸಿರಿಧಾನ್ಯಕ್ಕೆ ಉತ್ತಮ ಮಾರುಕಟ್ಟೆ ಇರುವ ಮಹಾರಾಷ್ಟ್ರದ ನಾಸಿಕ್‌ಗೆ ನಿತ್ಯ ಸಾವೆ ರವಾನೆಯಾಗುತ್ತಿದೆ.

***

ಕಡಿಮೆ ಮಳೆ ಬಿದ್ದರೂ ಸಿರಿಧಾನ್ಯಕ್ಕೆ ತೊಂದರೆಯಾಗದು. ನವಣೆ, ಸಾವೆ ಬೆಳೆದ ರೈತರು ನಷ್ಟ ಅನುಭವಿಸಿಲ್ಲ. ವಾಣಿಜ್ಯ ಬೆಳೆ ಬೆಳೆದ ಕೃಷಿಕರಿಗೆ ಮಾತ್ರ ತೊಂದರೆಯಾಗಿದೆ.

–ಮಂಜು ಎ.ಸಿ,ಸಹಾಯಕ ಕೃಷಿ ನಿರ್ದೇಶಕ, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.