ADVERTISEMENT

ದೀಪಾವಳಿ: ತಗ್ಗಿದ ನಗದು ಪ್ರಮಾಣ

ಇಪ್ಪತ್ತು ವರ್ಷಗಳಲ್ಲಿ ಹೀಗೆ ಆಗಿದ್ದು ಇದೇ ಮೊದಲು: ಎಸ್‌ಬಿಐ ಎಕೊವ್ರ್ಯಾಪ್ ವರದಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 19:49 IST
Last Updated 3 ನವೆಂಬರ್ 2022, 19:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದೀಪಾವಳಿ ಹಬ್ಬ ಇದ್ದ ವಾರದಲ್ಲಿ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಚಲಾವಣೆಯಲ್ಲಿದ್ದ ನಗದು ಹಣದ ಪ್ರಮಾಣ ಕಡಿಮೆ ಆಗಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)
ಹೇಳಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿ ಚಟುವಟಿಕೆ ಹೆಚ್ಚು ನಡೆಯುವುದು ವಾಡಿಕೆ. ಹೆಚ್ಚಿನ ಖರೀದಿ ಇದ್ದಾಗ ನಗದು ಚಲಾವಣೆಯೂ ಹೆಚ್ಚಿನ ಮಟ್ಟದಲ್ಲಿ ಇರುವುದು ಸಾಮಾನ್ಯ.

‘ಕಳೆದ ಕೆಲವು ವರ್ಷಗಳಲ್ಲಿ ಭಾರತದ ನಗದು ಪಾವತಿ ಆಧಾರಿತ ಅರ್ಥವ್ಯವಸ್ಥೆಯು ಸ್ಮಾರ್ಟ್‌ಫೋನ್‌ ಆಧಾರಿತ ಪಾವತಿ ಅರ್ಥವ್ಯವಸ್ಥೆಯಾಗಿ ಪರಿವರ್ತನೆ ಕಂಡಿದೆ’ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞ ಸೌಮ್ಯಕಾಂತಿ ಘೋಷ್ ಸಿದ್ಧಪಡಿಸಿರುವ ವರದಿಯು ಹೇಳಿದೆ.

ADVERTISEMENT

ಡಿಜಿಟಲ್ ವಹಿವಾಟುಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ, 2002ರ ನಂತರದಲ್ಲಿ ದೀಪಾವಳಿ ಹಬ್ಬದ ವಾರದಲ್ಲಿ ಚಲಾವಣೆಯಲ್ಲಿನ ನಗದಿನ ಪ್ರಮಾಣವು ಇದೇ ಮೊದಲ ಬಾರಿಗೆ ಕುಸಿತ ಕಂಡಿದೆ. 2009ರಲ್ಲಿಯೂ ದೀಪಾವಳಿ ವಾರದಲ್ಲಿ ಚಲಾವಣೆಯಲ್ಲಿ ಇದ್ದ ನಗದು ಹಣದ ಪ್ರಮಾಣವು ಕುಸಿದಿತ್ತು. ಆದರೆ, ಆಗ ಹಾಗೆ ಆಗಿದ್ದಕ್ಕೆ ಕಾರಣ ಅಂದಿನ ಆರ್ಥಿಕ ಹಿಂಜರಿತ ಎಂದು ಎಸ್‌ಬಿಐ ಅಂದಾಜು ಮಾಡಿದೆ.

ಈಚಿನ ವರ್ಷಗಳಲ್ಲಿ ಹಣದ ವಹಿವಾಟುಗಳಲ್ಲಿ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್‌ ಕಾರ್ಡ್‌ನ ಪಾಲು ಸ್ಥಿರವಾಗಿದೆ. ಆದರೆ ಏಕೀಕೃತ ಪಾವತಿ ವ್ಯವಸ್ಥೆಯ (ಯುಪಿಐ) ಪಾಲು 2015–16ನೆಯ ಆರ್ಥಿಕ ವರ್ಷದಲ್ಲಿ ಶೂನ್ಯ ಮಟ್ಟದಲ್ಲಿ ಇದ್ದಿದ್ದು, 2021–22ನೆಯ ಸಾಲಿನಲ್ಲಿ ಶೇ 16ಕ್ಕೆ ಏರಿಕೆ ಆಗಿದೆ.

2015–16ರಲ್ಲಿ ಕಾಗದ ಆಧಾರಿತ ಪಾವತಿಗಳ (ಚೆಕ್, ಡಿ.ಡಿ.) ಪ್ರಮಾಣವು ಶೇ 46ರಷ್ಟು ಇತ್ತು. ಅದು 2021–22ರಲ್ಲಿ ಶೇ 12.7ಕ್ಕೆ ಕುಸಿದಿದೆ ಎಂದು ವರದಿ ಹೇಳಿದೆ.

ಒಟ್ಟಾರೆ ಪಾವತಿ ವ್ಯವಸ್ಥೆ
ಯಲ್ಲಿ 2015–16ರಲ್ಲಿ ಶೇ 88ರಷ್ಟಿದ್ದ ನಗದಿನ ಪ್ರಮಾಣವು 2021–22ರಲ್ಲಿ ಶೇ 20ಕ್ಕೆ ಕುಸಿದಿದೆ. ಇದು 2026–27ನೆಯ ಹಣಕಾಸು ವರ್ಷದ ಹೊತ್ತಿಗೆ ಶೇ 11.15ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.

ಎನ್‌ಇಎಫ್‌ಟಿ ಸೇರಿದಂತೆ ವಿವಿಧ ಬಗೆಯ ಡಿಜಿಟಲ್ ಪಾವತಿಗಳ ಪಾಲು 2015–16ರಲ್ಲಿ ಶೇ 11.26ರಷ್ಟು ಇದ್ದಿದ್ದು 2021–22ರಲ್ಲಿ ಶೇ 80.4ಕ್ಕೆ ಏರಿಕೆ ಕಂಡಿದೆ.

2026–27ನೆಯ ಹಣಕಾಸು ವರ್ಷದಲ್ಲಿ ಡಿಜಿಟಲ್ ಪಾವತಿಗಳ ಪ್ರಮಾಣವು ಶೇ 88ಕ್ಕೆ ತಲುಪುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.