ADVERTISEMENT

ಇ–ಕಾಮರ್ಸ್‌: ಮೊಬೈಲ್ ‌ಟಿವಿಗಳ ಮಾರಾಟಕ್ಕೆ ತಡೆ

ನಿಲುವು ಬದಲಿಸಿದ ಕೇಂದ್ರ ಸರ್ಕಾರ

ಪಿಟಿಐ
Published 19 ಏಪ್ರಿಲ್ 2020, 21:45 IST
Last Updated 19 ಏಪ್ರಿಲ್ 2020, 21:45 IST
   

ನವದೆಹಲಿ: ಲಾಕ್‌ಡೌನ್‌ ಅವಧಿಯಲ್ಲಿ ಇ–ಕಾಮರ್ಸ್‌ನ ತಾಣಗಳು ಅಗತ್ಯವಲ್ಲದ ಸರಕುಗಳ ಮಾರಾಟವನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.

ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಸ್ನ್ಯಾಪ್‌ಡೀಲ್‌ ತಾಣಗಳಲ್ಲಿ ಮೊಬೈಲ್‌, ಟಿವಿ, ಫ್ರಿಜ್‌, ಲ್ಯಾಪ್‌ಟಾಪ್‌ ಮಾರಾಟ ಮಾಡಲು ನಾಲ್ಕು ದಿನಗಳ ಹಿಂದೆ ನೀಡಿದ್ದ ಅನುಮತಿಯನ್ನು ಭಾನುವಾರ ಹಠಾತ್ತಾಗಿ ರದ್ದುಪಡಿಸಲಾಗಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಇ–ಕಾಮರ್ಸ್‌ ಕಂಪನಿಗಳು ಅಗತ್ಯವಲ್ಲದ ಸರಕುಗಳನ್ನು ಮಾರಾಟ ಮಾಡಬಾರದು ಎಂದು ಸೂಚಿಸಿದ್ದಾರೆ. ಆಹಾರ, ಔಷಧಿ ಮತ್ತು ವೈದ್ಯಕೀಯ ಪರಿಕರಗಳ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಅಗತ್ಯವಲ್ಲದ ಸರಕುಗಳನ್ನು ಮಾರಾಟ ಮಾಡಲು ಇ–ಕಾಮರ್ಸ್‌ ಕಂಪನಿಗಳಿಗೆ ಅನುಮತಿ ನೀಡುವುದರಿಂದ ಲಾಕ್‌ಡೌನ್‌ ನಿಯಮಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ತನ್ನ ಈ ಹಿಂದಿನ ನಿರ್ಧಾರ ಬದಲಿಸಿದೆ’ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ತಿಳಿಸಿದ್ದಾರೆ.

ಇದೇ 20ರಿಂದ (ಸೋಮವಾರ) ಅಗತ್ಯವಲ್ಲದ ಸರಕುಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗುವುದು ಎಂದು 15ರಂದು ಗೃಹ ಸಚಿವಾಲಯ ತಿಳಿಸಿತ್ತು.

ಸರ್ಕಾರ ತನ್ನ ಈ ಹಿಂದಿನ ನಿರ್ಧಾರವನ್ನು ಕೊನೆಗಳಿಗೆಯಲ್ಲಿ ಬದಲಿಸಲು ಕಾರಣ ಏನೆಂಬುದು ತಿಳಿದು ಬಂದಿಲ್ಲ. ಇ–ಕಾಮರ್ಸ್‌ನ ದೈತ್ಯ ಸಂಸ್ಥೆಗಳಿಗೆ ಅವಕಾಶ ನೀಡಿದಂತೆ ಅಗತ್ಯವಲ್ಲದ ಸರಕುಗಳನ್ನು ಮಾರಾಟ ಮಾಡಲು ತಮಗೂ ಅವಕಾಶ ನೀಡಬೇಕು ಎಂದು ರಿಟೇಲ್‌ ವ್ಯಾಪಾರಿಗಳ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.