ADVERTISEMENT

ಕೈಗಾರಿಕಾ ಕ್ಲಸ್ಟರ್‌ ಬಲವರ್ಧನೆಗೆ ಪೂರಕ ವ್ಯವಸ್ಥೆ ಅಗತ್ಯ: ಆರ್ಥಿಕ ಸಮೀಕ್ಷೆ

ಪಿಟಿಐ
Published 29 ಜನವರಿ 2026, 12:47 IST
Last Updated 29 ಜನವರಿ 2026, 12:47 IST
<div class="paragraphs"><p>ಕೈಗಾರಿಕೆ (ಪ್ರಾತಿನಿಧಿಕ)</p></div>

ಕೈಗಾರಿಕೆ (ಪ್ರಾತಿನಿಧಿಕ)

   

ನವದೆಹಲಿ: ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಭಾರತವು ತನ್ನ ಕೈಗಾರಿಕಾ ಕ್ಲಸ್ಟರ್‌ಗಳ ಕಾರ್ಯತಂತ್ರವನ್ನು ಬಲಪಡಿಸಬೇಕು. ಹೆಚ್ಚಿನ ಉತ್ಪಾದಕತೆ, ಸುಧಾರಣೆ ಆಧಾರಿತ ಪರಿಸರವನ್ನು ಮರುರೂಪಿಸುವ ಅಗತ್ಯವಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಬಜೆಟ್‌ ಪೂರ್ವ ದಾಖಲೆಯನ್ನು ಲೋಕಸಭೆಯಲ್ಲಿ ಗುರುವಾರ ಸಲ್ಲಿಸಲಾಯಿತು. ಅದರಲ್ಲಿ ಈ ಅಂಶಗಳನ್ನು ತಿಳಿಸಲಾಗಿದೆ.

ADVERTISEMENT

‘ವಿವಿಧ ಯೋಜನೆಗಳ ಮೂಲಕ ಕಳೆದ ಕೆಲ ದಶಕಗಳಿಂದ ಕೈಗಾರಿಕಾ ಕ್ಲಸ್ಟರ್‌ಗಳ ಬಲವರ್ಧನೆಗೆ ಭಾರತ ಪ್ರಯತ್ನಿಸುತ್ತಿದೆ. ಜಾಗತಿಕ ಸ್ಪರ್ಧೆ ಮತ್ತು ದೇಶೀಯ ಸಾಮರ್ಥ್ಯದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಈ ಅಂತರ ತಗ್ಗಿಸಲು ಕ್ಲಸ್ಟರ್‌ನ ಕಾರ್ಯತಂತ್ರವನ್ನು ಉನ್ನತೀಕರಿಸುವ ಅಗತ್ಯವಿದೆ’ ಎಂದು ಹೇಳಲಾಗಿದೆ.

‘ಮೊದಲನೆಯದಾಗಿ, ಬೃಹತ್‌ ಹಾಗೂ ಅಧಿಕ ಸಾಮರ್ಥ್ಯದ ಪ್ರದೇಶಗಳನ್ನು ಗುರುತಿಸಲು ಆದ್ಯತೆ ನೀಡಬೇಕು. ಅವುಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸಬೇಕು. ಆ ಜಾಗಗಳ ಪರಭಾರೆಗೆ ಆಧುನಿಕ ವ್ಯವಸ್ಥೆಯಡಿ ಭೂ ಸಂಗ್ರಹಣಾ ಕಾರ್ಯವಿಧಾನಗಳ ಮೂಲಕ ಅಗತ್ಯ ಪ್ರಮಾಣವನ್ನು ಖಚಿತಪಡಿಸಿಕೊಳ್ಳಬೇಕು’ ಎಂದೆನ್ನಲಾಗಿದೆ.

‘ಎರಡನೆಯದಾಗಿ, ಗುಜರಾತ್‌ನ ಗಿಫ್ಟ್‌ ಸಿಟಿಯಲ್ಲಿರುವ ಐಎಫ್‌ಎಸ್‌ಸಿಎ ಮಾದರಿಯಲ್ಲಿ ಸಾಂಸ್ಥಿಕ ಕಾರ್ಯವಿಧಾನ ಸಂಸ್ಥೆಯನ್ನು ಸ್ಥಾಪಿಸಬೇಕು. ಇಲ್ಲಿ ಕೈಗಾರಿಕೆಗಳಿಗೆ ಅನುಮತಿ ನೀಡುವ ವ್ಯವಸ್ಥೆಯ ಸುಧಾರಣೆ ಮತ್ತು ಜಾಗತಿಕ ಮಟ್ಟದ ವೇಗಕ್ಕೆ ಸರಿಸಮಾನ ಕಾರ್ಯವಿಧಾನವನ್ನು ಜಾರಿಗೆ ತರಬೇಕು’ ಎಂದಿದೆ.

‘ಮೂರನೆಯದಾಗಿ, ಮಾಸ್ಟರ್‌ಪ್ಲಾನ್‌, ನಿರ್ಮಾಣ, ಮತ್ತು ಪ್ರಮುಖ ಮೂಲಸೌಕರ್ಯಗಳ ನಿರ್ವಹಣೆಗೆ ಖಾಸಗಿ ಡೆವಲಪರ್‌ಗಳ ಪಾಲನ್ನು ಹೆಚ್ಚಿಸಬೇಕು’ ಎಂದು ಸಮೀಕ್ಷೆಯು ಸಲಹೆ ನೀಡಿದೆ.

ಈ ಚೌಕಟ್ಟಿನಡಿಯಲ್ಲಿ ವಿನ್ಯಾಸಗೊಳಿಸಲಾದ ಕ್ಲಸ್ಟರ್‌ಗಳು ಭಾರತದ ಬೆಳವಣಿಗೆಯ ಪ್ರಾಥಮಿಕ ಎಂಜಿನ್‌ಗಳಾಗುವ ಸಾಮರ್ಥ್ಯ ಹೊಂದಿರಬಹುದು. ಇವುಗಳು ಜಾಗತಿಕ ಮೌಲ್ಯ ಸರಪಳಿಯ ಜತೆ ದೇಶದ ಆರ್ಥಿಕ ಬೆಳವಣಿಗೆಯನ್ನು ಬೆಸೆಯುವಲ್ಲಿ ವೇಗ ಕಲ್ಪಿಸಬಹುದು ಎಂದಿದೆ.

1997ರ ಕೈಗಾರಿಕಾ ಉದ್ಯಾನ ಯೋಜನೆ ಮತ್ತು 2005ರ ಎಸ್‌ಇಝಡ್‌ ಕಾಯ್ದೆಯಿಂದ ಹಿಡಿದು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ ಮತ್ತು ಎಲೆಕ್ಟ್ರಾನಿಕ್ಸ್, ಜವಳಿ ಮತ್ತು ಸಾಫ್ಟ್‌ವೇರ್‌ ವಲಯಗಳ ರಚನೆ ಮೂಲಕ ವಿವಿಧ ಯೋಜನೆಗಳ ಕೈಗಾರಿಕಾ ಕ್ಲಸ್ಟರ್‌ಗಳನ್ನು ನಿರ್ಮಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಸಮೀಕ್ಷೆ ಹೇಳಿದೆ.

ದೇಶೀಯ ಉತ್ಪಾದನೆಯಲ್ಲಿ ಸ್ವಯಂ ಬೆಳವಣಿಗಗೆ ಪೂರಕವಾದ ಹಲವು ಕ್ಲಸ್ಟರ್‌ಗಳನ್ನು ಭಾರತ ಹೊಂದಿದ್ದರೂ, ಈ ಕ್ಲಸ್ಟರ್‌ಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಪರಿಸರ ವ್ಯವಸ್ಥೆಗಳಾಗಿ ಪರಿವರ್ತಿಸಲು ಎರಡು ಪ್ರಮುಖ ರಚನಾತ್ಮಕ ಅಂಶಗಳನ್ನು ಪರಿಹರಿಸುವ ಅಗತ್ಯವಿದೆ. ಅವುಗಳೆಂದರೆ ನಿರೀಕ್ಷಿತ ಗುರಿ ತಲುಪುವುದು ಹಾಗೂ ನಿಯಮಗಳಲ್ಲಿ ಸರಳತೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅದು ಹೇಳಿದೆ.

ಜಾಗತಿಕವಾಗಿ ಸ್ಪರ್ಧಾತ್ಮಕ ಕೈಗಾರಿಕಾ ಕೇಂದ್ರವಾಗಿ ಹೊರಹೊಮ್ಮುವ ಭಾರತದ ಮಹತ್ವಾಕಾಂಕ್ಷೆಯು ಅದರ ಕೈಗಾರಿಕಾ ಸಮೂಹಗಳ ಶಕ್ತಿ ಮತ್ತು ಪ್ರಮಾಣವನ್ನು ನಿರ್ಣಾಯಕವಾಗಿ ಅವಲಂಬಿಸಿರುತ್ತದೆ ಎಂದು ಅದು ಹೇಳಿದೆ.

ಉನ್ನತ ಕಾರ್ಯಕ್ಷಮತೆಯ ಕ್ಲಸ್ಟರ್‌ಗಳು ಕೈಗಾರಿಕಾ ಚಟುವಟಿಕೆಗೆ ಮಾತ್ರ ಕೊಡುಗೆ ನೀಡುವುದಿಲ್ಲ ಬದಲಾಗಿ ಅವು ರಾಷ್ಟ್ರದ ರಫ್ತು ಬೆಳವಣಿಗೆ, ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಹಾಯಕ ಎಂದೂ ‌ಸಮೀಕ್ಷೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.