ಅಡುಗೆ ಎಣ್ಣೆ (ಸಾಂದರ್ಭಿಕ ಚಿತ್ರ)
– ಕೃತಕ ಬುದ್ಧಿಮತ್ತೆ ಚಿತ್ರ
ನವದೆಹಲಿ: ಕಚ್ಚಾ ತಾಳೆ ಎಣ್ಣೆ, ಸೋಯಾಬೀನ್ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಶುಕ್ರವಾರ ಶೇ 10ಕ್ಕೆ ಇಳಿಕೆ ಮಾಡಿದೆ. ಇದರಿಂದ ಈ ಎಣ್ಣೆಗಳ ದರ ಇಳಿಕೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಶುಕ್ರವಾರದಿಂದಲೇ ಈ ಪರಿಷ್ಕೃತ ಸುಂಕ ದರ ಜಾರಿಗೆ ಬರಲಿದೆ ಎಂದು ಹೇಳಿದೆ.
ಈ ಹಿಂದೆ ಈ ಎಣ್ಣೆಗಳ ಮೇಲೆ ಶೇ 20ರಷ್ಟು ಸುಂಕ ಹೇರಲಾಗುತ್ತಿತ್ತು. ಭಾರತ ತನ್ನ ಅಗತ್ಯದ ಶೇ 50ರಷ್ಟು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ.
2023–24ರ ಮಾರುಕಟ್ಟೆ ವರ್ಷದಲ್ಲಿ (ನವೆಂಬರ್‌ನಿಂದ ಅಕ್ಟೋಬರ್) ಭಾರತವು ₹1.32 ಲಕ್ಷ ಕೋಟಿ ಮೌಲ್ಯದ 159.6 ಲಕ್ಷ ಟನ್ ಖಾದ್ಯ ತೈಲವನ್ನು ಆಮದು ಮಾಡಿಕೊಂಡಿತ್ತು.
ಈ ಮೂರು ಉತ್ಪನ್ನಗಳ ಮೇಲೆ ಸದ್ಯ ಶೇ 16.5ರಷ್ಟು (ಮೂಲ ಅಬಕಾರಿ ಸುಂಕ ಹಾಗೂ ಇತರೆ ಶುಲ್ಕ ಸೇರಿ) ಆಮದು ಸುಂಕ ಇದೆ. ಈ ಹಿಂದೆ ಶೇ 27.5ರಷ್ಟಿತ್ತು.
ಇದೇ ವೇಳೆ ಸಂಸ್ಕೃರಿತ ಎಣ್ಣೆ ಮೇಲಿನ ಅಬಕಾರಿ ಸುಂಕ ಶೇ 32.5ರಲ್ಲಿ ಯಥಾಸ್ಥಿತಿಯಲ್ಲಿದೆ. ಒಟ್ಟಾರೆ ಸುಂಕ ಶೇ 35.75ರಷ್ಟಿದೆ.
ಭಾರತವು ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಎಣ್ಣೆ ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಸೋಯಾಬೀನ್ ತರಿಸಿಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.