ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ಎಲೆಕ್ಟ್ರಾನಿಕ್ಸ್ ವಲಯದ ರಫ್ತು ಪ್ರಮಾಣ ಶೇ 47ರಷ್ಟು ಏರಿಕೆಯಾಗಿದೆ. ಇದರ ಒಟ್ಟು ಮೌಲ್ಯ ₹1.06 ಲಕ್ಷ ಕೋಟಿಯಷ್ಟಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಒಟ್ಟು ರಫ್ತು ಪೈಕಿ ಅಮೆರಿಕ ಶೇ 60.17ರಷ್ಟು ಪಾಲು ಹೊಂದಿದೆ. ಯುಎಇ (ಶೇ 8.09), ಚೀನಾ (ಶೇ 3.88), ನೆದರ್ಲೆಂಡ್ಸ್ (ಶೇ 2.68) ಮತ್ತು ಜರ್ಮನಿ (ಶೇ 2.09ರಷ್ಟು) ನಂತರದ ಸ್ಥಾನಗಳಲ್ಲಿ ಇವೆ.
ಇದೇ ಅವಧಿಯಲ್ಲಿ ಸಿದ್ಧಪಡಿಸಿದ ಉಡುಪುಗಳ ರಫ್ತು ಪ್ರಮಾಣ ಶೇ 34ರಷ್ಟು ಹೆಚ್ಚಳವಾಗಿದೆ. ಇದರ ಒಟ್ಟು ಮೌಲ್ಯ ₹36,112 ಕೋಟಿಯಷ್ಟಾಗಿದೆ. ರಫ್ತಿನಲ್ಲಿ ಅಮೆರಿಕ ಶೇ 8.81ರಷ್ಟು ಪಾಲನ್ನು ಹೊಂದಿದೆ ಎಂದು ತಿಳಿಸಿದೆ.
ಈ ಅಂಕಿ ಅಂಶಗಳು ಸಿದ್ಧಪಡಿಸಿದ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ನಿರಂತರ ಸ್ಪರ್ಧಾತ್ಮಕತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ತಿಳಿಸಿದೆ. ಸಾಗರೋತ್ಪನ್ನಗಳ ರಫ್ತಿನಲ್ಲಿ ಶೇ 19ರಷ್ಟು ಏರಿಕೆಯಾಗಿದ್ದು, ₹16,806 ಕೋಟಿಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.