ADVERTISEMENT

ನಕಲಿ ಖಾತೆಗಳ ಬಗ್ಗೆ ಮಾಹಿತಿ ನೀಡದಿದ್ದರೆ 'ಟ್ವಿಟರ್' ಖರೀದಿಸಲಾರೆ: ಇಲಾನ್ ಮಸ್ಕ್

ರಾಯಿಟರ್ಸ್
Published 6 ಜೂನ್ 2022, 15:53 IST
Last Updated 6 ಜೂನ್ 2022, 15:53 IST
ಇಲಾನ್ ಮಸ್ಕ್
ಇಲಾನ್ ಮಸ್ಕ್   

ಬೆಂಗಳೂರು: ‘ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಟ್ವಿಟರ್ ಕಂಪನಿಯು ಮಾಹಿತಿ ನೀಡಲು ವಿಫಲವಾದಲ್ಲಿ, ಆ ಕಂಪನಿಯನ್ನು ಖರೀದಿಸಲಾರೆ’ ಎಂದು ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇಲಾನ್ ಮಸ್ಕ್ ಹೇಳಿದ್ದಾರೆ. ಮಸ್ಕ್ ಅವರು ₹ 3.41 ಲಕ್ಷ ಕೋಟಿಗೆ (44 ಬಿಲಿಯನ್ ಡಾಲರ್) ಟ್ವಿಟರ್ ಕಂಪನಿಯನ್ನು ಖರೀದಿಸಲು ಮುಂದಾಗಿದ್ದರು.

ಮಸ್ಕ್ ಅವರು ಈ ವಿಚಾರವಾಗಿ ಸೋಮವಾರ ಪತ್ರವೊಂದನ್ನು ‍ಬರೆದಿದ್ದಾರೆ. ಟ್ವಿಟರ್ ಕಂಪನಿಯು ತನ್ನ ಹೊಣೆಗಾರಿಕೆಗಳಿಗೆ ಚ್ಯುತಿ ತಂದಿರುವುದು ಸ್ಪಷ್ಟ. ಟ್ವಿಟರ್ ಖರೀದಿ ಒಪ್ಪಂವನ್ನು ರದ್ದುಗೊಳಿಸುವ ಎಲ್ಲ ಹಕ್ಕುಗಳನ್ನು ಮಸ್ಕ್ ಅವರು ಹೊಂದಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮಸ್ಕ್ ಅವರು ಟ್ವಿಟರ್ ಖರೀದಿ ಒಪ್ಪಂದವನ್ನು ರದ್ದುಪಡಿಸುವುದಾಗಿ ಲಿಖಿತವಾಗಿ ಎಚ್ಚರಿಕೆ ನೀಡಿರುವುದು ಇದೇ ಮೊದಲು. ಮಸ್ಕ್ ಅವರು ಈ ಹಿಂದೆ, ನಕಲಿ ಖಾತೆಗಳಿಗೆ ಸಂಬಂಧಿಸಿದ ಅಂಕಿ–ಅಂಶಗಳು ಟ್ವಿಟರ್ ಕಡೆಯಿಂದ ಸಲ್ಲಿಕೆ ಆಗುವವರೆಗೆ ಖರೀದಿ ಒಪ್ಪಂದವನ್ನು ತಡೆಹಿಡಿಯುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದರು.

ADVERTISEMENT

‘ವಿಲೀನ ಒಪ್ಪಂದದಲ್ಲಿ ಇರುವ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲು ಟ್ವಿಟರ್ ನಿರಾಕರಿಸುತ್ತಿದೆ ಎಂದು ಮಸ್ಕ್ ನಂಬಿದ್ದಾರೆ. ಇದು, ಕಂಪನಿಯು ಅಂಕಿ–ಅಂಶಗಳನ್ನು ತಡೆಹಿಡಿಯುತ್ತಿದೆ ಎಂಬ ಅನುಮಾನ ಹೆಚ್ಚಾಗಲು ಕಾರಣವಾಗಿದೆ’ ಎಂದು ‍ಪತ್ರದಲ್ಲಿ ಹೇಳಲಾಗಿದೆ.

ನಕಲಿ ಖಾತೆಗಳ ಪ್ರಮಾಣವು ಒಟ್ಟು ಖಾತೆಗಳ ಶೇಕಡ 5ರಷ್ಟು ಎಂದು ಟ್ವಿಟರ್ ಸಾರ್ವಜನಿಕವಾಗಿ ತಿಳಿಸಿತ್ತು. ಆದರೆ, ಈ ವಿವರವನ್ನು ಮಸ್ಕ್ ಒಪ್ಪಿರಲಿಲ್ಲ. ನಕಲಿ ಖಾತೆಗಳ ಪ್ರಮಾಣವು ಕನಿಷ್ಠ ಶೇ 20ರಷ್ಟು ಆಗಿರಬೇಕು ಎಂದು ಅವರು ಹೇಳಿದ್ದರು.

ನಕಲಿ ಖಾತೆಗಳ ಪ್ರಮಾಣ ಎಷ್ಟಿದೆ ಎಂಬುದನ್ನು ಪತ್ತೆ ಮಾಡಲು ಕೆಲವು ಅಂಕಿ–ಅಂಶಗಳು ಬೇಕು ಎಂದು ಮಸ್ಕ್ ಹೇಳಿದ್ದರು. ‘ಟ್ವಿಟರ್‌ನ ಮಾಲೀಕತ್ವವನ್ನು ಪಡೆಯಲು, ಅದರ ಖರೀದಿಗೆ ಹಣ ಒಗ್ಗೂಡಿಸಲು ಮಸ್ಕ್ ಅವರು ಈ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದಾರೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ವಿಚಾರವಾಗಿ ಟ್ವಿಟರ್ ಕಡೆಯಿಂದ ತಕ್ಷಣಕ್ಕೆ ‍ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.