ADVERTISEMENT

ಕಾರ್ಪೊರೇಟ್ ಸಂಸ್ಥೆಗಳಿಂದ ಹೊಸ ವರ್ಷದಲ್ಲಿ ಹೆಚ್ಚಿನ ನೇಮಕಾತಿ

ಪಿಟಿಐ
Published 22 ಡಿಸೆಂಬರ್ 2020, 12:45 IST
Last Updated 22 ಡಿಸೆಂಬರ್ 2020, 12:45 IST
ನೇಮಕಾತಿಯೊಂದರ ಪ್ರತಿನಿಧಿಕ ಚಿತ್ರ
ನೇಮಕಾತಿಯೊಂದರ ಪ್ರತಿನಿಧಿಕ ಚಿತ್ರ    

ನವದೆಹಲಿ: ಕಚೇರಿಯಿಂದ ಹೊರಗಿದ್ದೇ ಕಚೇರಿಯ ಕೆಲಸ ಮಾಡುವ ಹೊಸ ಕೆಲಸದ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿರುವ ಕಾರ್ಪೊರೇಟ್ ಜಗತ್ತು, ಹೊಸ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ಹವಣಿಕೆಯಲ್ಲಿ ಇದೆ.

2020ರಲ್ಲಿ ಬಹುತೇಕ ಕಂಪನಿಗಳು ತಮ್ಮ ನೇಮಕಾತಿ ಯೋಜನೆಗಳನ್ನು ‘ಆದ್ಯತೆಯ ಪಟ್ಟಿಯಲ್ಲಿ ಇಲ್ಲದ್ದು’ ಎಂದು ವರ್ಗೀಕರಿಸಿದ್ದವು. ಹೀಗಿದ್ದರೂ, ಈಗ ಕಾರ್ಪೊರೇಟ್ ಜಗತ್ತಿನಲ್ಲಿ ಎಚ್ಚರಿಕೆಯ ಆಶಾಭಾವನೆಯೊಂದು ಮೊಳೆಯುತ್ತಿದೆ. ಹೊಸ ವರ್ಷದಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಕಾರ್ಪೊರೇಟ್‌ ಕಂಪನಿಗಳು ಸಿದ್ಧಪಡಿಸುತ್ತಿರುವ ಯೋಜನೆಗಳಲ್ಲಿ ಇದು ಎದ್ದುಕಾಣುತ್ತಿದೆ.

‘ಮಾರುಕಟ್ಟೆಯಲ್ಲಿ ಚೇತರಿಕೆಯ ಲಕ್ಷಣಗಳು ಕಾಣಿಸುತ್ತಿವೆ. ಎಲ್ಲ ವಲಯಗಳ ಕೈಗಾರಿಕೆಗಳೂ ನೇಮಕಾತಿಯನ್ನು ತುಸು ಎಚ್ಚರಿಕೆಯಿಂದ ಹೆಚ್ಚಿಸಿವೆ. ಹೊಸ ನೇಮಕಾತಿ ನಡೆಸಬೇಕು ಎಂಬ ಇಚ್ಛೆಯು ಲಾಕ್‌ಡೌನ್‌ ಅವಧಿಯಲ್ಲಿ ಶೇಕಡ 11ರಷ್ಟು ಇದ್ದಿದ್ದು, ವರ್ಷದ ಮಧ್ಯಭಾಗದ ಹೊತ್ತಿಗೆ ಶೇಕಡ 18ಕ್ಕೆ ಹೆಚ್ಚಳವಾಗಿತ್ತು. ಇದು ಇನ್ನೂ ಹೆಚ್ಚಾಗುತ್ತಿದೆ’ ಎಂದು ಟೀಮ್‌ಲೀಸ್‌ ಸರ್ವಿಸಸ್‌ನ ಅಧಿಕಾರಿ ದೇವಲ್ ಸಿಂಗ್ ತಿಳಿಸಿದರು.

ADVERTISEMENT

ನೇಮಕಾತಿ ನಡೆಸುವಲ್ಲಿ ಕಾರ್ಪೊರೇಟ್‌ ಕಂಪನಿಗಳು ತುಸು ಎಚ್ಚರಿಕೆ ವಹಿಸುತ್ತಿವೆಯಾದರೂ, ಉದ್ಯೋಗ ಮಾರುಕಟ್ಟೆಯಲ್ಲಿ ಆಶಾಭಾವನೆ ಕಾಣುತ್ತಿದೆ. ಲಾಕ್‌ಡೌನ್‌ ಅವಧಿಗೆ ಹೋಲಿಸಿದರೆ ಉದ್ಯೋಗ ಅವಕಾಶಗಳ ಪ್ರಮಾಣದಲ್ಲಿ ಶೇಕಡ 50ರಷ್ಟು ಹೆಚ್ಚಳ ಆಗಿದೆ ಎಂದು ಸಿಂಗ್ ಹೇಳಿದರು. ವೇತನ ಕಡಿತದ ಕ್ರಮವನ್ನು ದೀಪಾವಳಿ ನಂತರ ಹಲವು ಕಂಪನಿಗಳಲ್ಲಿ ನಿಲ್ಲಿಸಲಾಗಿದೆ, ಕೆಲವು ಕಂಪನಿಗಳು ಬೋನಸ್‌ ನೀಡಿವೆ. ತಂತ್ರಜ್ಞಾನ ವಲಯದ ಕೆಲವು ಕಂಪನಿಗಳು ನೌಕರರ ಕಾರ್ಯಕ್ಷಮತೆಯ ಮೌಲ್ಯಮಾಪನ ನಡೆಸಿ, ವೇತನ ಹೆಚ್ಚಳಕ್ಕೆ ಮುಂದಾಗಿವೆ ಎಂದು ಸಿಂಗ್ ವಿವರಿಸಿದರು.

ಭಾರತದ ಕಾರ್ಪೊರೇಟ್ ವಲಯವು ‘ಚೇತರಿಕೆಯ ಆರೋಗ್ಯಕರ ಲಕ್ಷಣಗಳನ್ನು’ ತೋರಿಸುತ್ತಿದೆ ಎಂಬುದನ್ನು ಮ್ಯಾನ್‌ಪವರ್‌ ಗ್ರೂಪ್‌ನ ‘ಉದ್ಯೋಗ ಮುನ್ನೋಟ ಸಮೀಕ್ಷೆ’ಯು ಕಂಡುಕೊಂಡಿದೆ. ಈ ಸಮೀಕ್ಷೆಗಾಗಿ ದೇಶದಾದ್ಯಂತ ಒಟ್ಟು 1,518 ಉದ್ಯೋಗದಾತರ ಅಭಿಪ್ರಾಯ ಸಂಗ್ರಹಿಸಲಾಗಿದೆ. 2021ರ ಮೊದಲ ಮೂರು ತಿಂಗಳಲ್ಲಿ ಹೆಚ್ಚಿನ ಜನರನ್ನು ನೇಮಕ ಮಾಡಿಕೊಳ್ಳಲು ಕಂಪನಿಗಳು ಉತ್ಸುಕವಾಗಿವೆ ಎಂಬುದನ್ನೂ ಸಮೀಕ್ಷೆ ಕಂಡುಕೊಂಡಿದೆ.

‘ಎಲ್ಲಿಂದಲಾದರೂ ಕೆಲಸ ಮಾಡಬಹುದು ಎಂಬುದು ಕೆಲವು ವಲಯಗಳಲ್ಲಿ ಖಚಿತವಾಗಿರುವ ಕಾರಣ ಉದ್ಯೋಗದಾತರಿಗೂ ಉದ್ಯೋಗ ಆಕಾಂಕ್ಷಿಗಳಿಗೂ ಹೊಸ ಅವಕಾಶ ಸೃಷ್ಟಿಯಾದಂತೆ ಆಗಿದೆ’ ಎಂದು ಸ್ಕಿಲ್‌ಸಾಫ್ಟ್‌ ಇಂಡಿಯಾ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ನಿರ್ದೇಶಕ ಕೃಷ್ಣಪ್ರಸಾದ್ ಹೇಳಿದರು.

ಸಾಂಕ್ರಾಮಿಕದ ಕಾರಣದಿಂದಾಗಿ ಎಲ್ಲಿಂದಲಾದರೂ ಕೆಲಸ ಮಾಡಬಹುದು ಎಂಬ ವ್ಯವಸ್ಥೆಯನ್ನು ಕಾರ್ಪೊರೇಟ್ ಸಂಸ್ಥೆಗಳು ಅಳವಡಿಸಿಕೊಳ್ಳುವಂತೆ ಆಯಿತು. ಕೆಲಸದ ಈ ವ್ಯವಸ್ಥೆಯನ್ನು ಬಹುತೇಕ ಕಂಪನಿಗಳು 2021ರಲ್ಲೂ ಮುಂದುವರಿಸಬೇಕಾಗುತ್ತದೆ. ಹೊಸ ವ್ಯವಸ್ಥೆಯು ಕಂಪನಿಗಳ ಪಾಲಿಗೆ ಹೊಸ ಪ್ರತಿಭೆಗಳನ್ನು ಹುಡುಕಿಕೊಳ್ಳಲಿಕ್ಕೆ ಕೂಡ ನೆರವಾಗುತ್ತದೆ ಎಂದು ಅಡ್ವೈಸರಿ ಸರ್ವಿಸಸ್‌ನ ನಿರ್ದೇಶಕ ನಿಶಿತ್ ಉಪಾಧ್ಯಾಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.