ನವದೆಹಲಿ: ದೇಶದಲ್ಲಿ 2017–18ರಿಂದ 2023–24ರ ನಡುವೆ ಹೊಸದಾಗಿ ಶೇ 35ರಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಕೆಎನ್‌ಇಎಂಎಸ್ (ಬಂಡವಾಳ– ಶ್ರಮ– ಎನರ್ಜಿ– ವಸ್ತು–ಸೇವೆ) ಕುರಿತ ದತ್ತಾಂಶವನ್ನು ಬಿಡುಗಡೆಗೊಳಿಸಿದೆ. ಇದರ ಪ್ರಕಾರ ಕೃಷಿ, ವ್ಯಾಪಾರ, ಹಣಕಾಸು ಸೇವೆ ಸೇರಿ 27 ಪ್ರಮುಖ ವಲಯಗಳಲ್ಲಿ 2017–18ರಲ್ಲಿ 47.5 ಕೋಟಿ ಉದ್ಯೋಗಗಳಿದ್ದವು. ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ಈ ಸಂಖ್ಯೆ 64.33 ಕೋಟಿಗೆ ಮುಟ್ಟಿದೆ ಎಂದು ಅವರು, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಆರು ಆರ್ಥಿಕ ವರ್ಷಗಳ ಅವಧಿಯಲ್ಲಿ ಹೊಸದಾಗಿ 16.83 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಇದೇ ಅವಧಿಯಲ್ಲಿ ತಯಾರಿಕಾ ವಲಯದಲ್ಲಿ (ಔಪಚಾರಿಕ ಮತ್ತು ಅನೌಪಚಾರಿಕ) 85 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಿಳಿಸಿದ್ದಾರೆ.
‘ದೇಶದಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳಕ್ಕೆ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ಕಾರಣವಾಗಿವೆ. ಬಡತನ, ಆರ್ಥಿಕ ಹಿಂದುಳಿದಿರುವಿಕೆ, ಸಾಕ್ಷರತೆ ಮತ್ತು ಸೌಲಭ್ಯ ಕೊರತೆಯೂ ಕಾರಣವಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಾಲಕಾರ್ಮಿಕ ಪದ್ಧತಿಯ ತಡೆಗೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಂಡಿದೆ. ಬಾಲಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸುತ್ತಿದೆ. ಮಕ್ಕಳ ಉಚಿತ ಶಿಕ್ಷಣ ನೀಡುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.