ADVERTISEMENT

ಎಂಜಿನಿಯರಿಂಗ್ ಸರಕುಗಳ ರಫ್ತು ಹೆಚ್ಚಳ: ಇಇಪಿಸಿ

ಎಂಜಿನಿಯರಿಂಗ್ ಸರಕುಗಳ ರಫ್ತು ಶೇ 2.93ರಷ್ಟು ಹೆಚ್ಚಳ

ಪಿಟಿಐ
Published 31 ಅಕ್ಟೋಬರ್ 2025, 15:50 IST
Last Updated 31 ಅಕ್ಟೋಬರ್ 2025, 15:50 IST
ರಫ್ತು
ರಫ್ತು   

ಕೋಲ್ಕತ್ತ: ಸೆಪ್ಟೆಂಬರ್‌ ತಿಂಗಳಿನಲ್ಲಿ ದೇಶದ ಎಂಜಿನಿಯರಿಂಗ್ ಸರಕುಗಳ ರಫ್ತು ಮೌಲ್ಯ ₹89,726 ಕೋಟಿಯಷ್ಟಾಗಿದೆ ಎಂದು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿ (ಇಇಪಿಸಿ) ಶುಕ್ರವಾರ ತಿಳಿಸಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತು ಪ್ರಮಾಣದಲ್ಲಿ ಶೇ 2.93ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ. ಆದರೆ, ಇದೇ ಅವಧಿಯಲ್ಲಿ ಅಮೆರಿಕಕ್ಕೆ ರಫ್ತು ಶೇ 9.4ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ₹13,755 ಕೋಟಿ ಮೌಲ್ಯದ ಎಂಜಿನಿಯರಿಂಗ್‌ ಸರಕುಗಳ ರಫ್ತಾಗಿದ್ದವು. ಈ ಬಾರಿ ₹12,424 ಕೋಟಿಗೆ ಇಳಿಕೆಯಾಗಿದೆ. ಅಮೆರಿಕದ ಆಡಳಿತವು ಭಾರತದ ಸರಕುಗಳ ಆಮದು ಮೇಲೆ ಹೆಚ್ಚುವರಿ ಸುಂಕ ವಿಧಿಸಿದ್ದರಿಂದ ರಫ್ತು ಇಳಿಕೆ ಆಗಿದೆ. ಆದರೂ, ಅಮೆರಿಕವು ಈಗಲೂ ದೇಶದ ಸರಕುಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದೆ. 

ADVERTISEMENT

ಯುಎಇಗೆ ₹5,652 ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ. ಚೀನಾ ರಫ್ತಿನಲ್ಲಿ ಶೇ 14.4ರಷ್ಟು ಹೆಚ್ಚಳವಾಗಿದ್ದು, ₹2,682 ಕೋಟಿಯಷ್ಟಾಗಿದೆ. 

ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಎಂಜಿನಿಯರಿಂಗ್‌ ಸರಕುಗಳ ರಫ್ತು ಶೇ 5.35ರಷ್ಟು ಹೆಚ್ಚಳವಾಗಿದ್ದು, ₹5.26 ಲಕ್ಷ ಕೋಟಿಯಷ್ಟಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹5 ಲಕ್ಷ ಕೋಟಿಯಷ್ಟಾಗಿತ್ತು ಎಂದು ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ದೇಶದ ಒಟ್ಟು ಸರಕುಗಳ ರಫ್ತಿನಲ್ಲಿ ಎಂಜಿನಿಯರಿಂಗ್ ಸರಕುಗಳ ರಫ್ತು ಶೇ 27.8ರಷ್ಟು ಪಾಲು ಹೊಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.