ನವದೆಹಲಿ: ಪಿಎಫ್ ಖಾತೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಪಡೆಯಲು ಆನ್‌ಲೈನ್ ಪೋರ್ಟಲ್ ಬಳಸಬೇಕು ಎಂದು ಸದಸ್ಯರಿಗೆ ಸಲಹೆ ನೀಡಿರುವ ನೌಕರರ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ), ಹೊರಗಿನ ಏಜೆಂಟರ ಸಹಾಯ ಪಡೆಯುವ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.
ಸೇವೆಗಳು ತ್ವರಿತವಾಗಿ ಸಿಗುವಂತೆ ಮಾಡಲು, ಪಾರದರ್ಶಕವಾಗಿ ಹಾಗೂ ಬಳಕೆದಾರ ಸ್ನೇಹಿ ಆಗಿರುವಂತೆ ಮಾಡು ಇಪಿಎಫ್‌ಒ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ಹೇಳಿದೆ.
ಸೈಬರ್ ಕೆಫೆ ನಡೆಸುತ್ತಿರುವ ಹಲವರು, ಕೆಲವು ಫಿನ್‌ಟೆಕ್ ಕಂಪನಿಗಳು ಉಚಿತವಾಗಿ ದೊರೆಯುವ ಸೇವೆಗಳನ್ನು ಸದಸ್ಯರು ಪಡೆದುಕೊಳ್ಳುವುದಕ್ಕೆ ದೊಡ್ಡ ಮೊತ್ತದ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸಚಿವಾಲಯ ಹೇಳಿದೆ. ಹಲವು ಸಂದರ್ಭಗಳಲ್ಲಿ ಇವರು ಇಪಿಎಫ್‌ಒದ ಆನ್‌ಲೈನ್ ಪೋರ್ಟಲ್ ಬಳಸಿ ಸೇವೆ ಲಭ್ಯವಾಗಿಸುತ್ತಾರೆ. ಈ ಪೋರ್ಟಲ್‌ಅನ್ನು ಇಪಿಎಫ್‌ಒ ಸದಸ್ಯರು ಉಚಿತವಾಗಿಯೇ ಬಳಸಬಹುದು.
ಇಪಿಎಫ್‌ಒ ಸಂಬಂಧಿತ ಸೇವೆಗಳನ್ನು ಪಡೆಯಲು ಹೊರಗಿನ ಸಂಸ್ಥೆಗಳ ಅಥವಾ ಏಜೆಂಟರ ನೆರವು ಪಡೆಯಬಾರದು. ಈ ರೀತಿ ನೆರವು ಪಡೆದಾಗ ಸದಸ್ಯರ ಹಣಕಾಸಿನ ವಿವರಗಳು ಬಹಿರಂಗ ಆಗಬಹುದು ಎಂದು ಸಚಿವಾಲಯವು ಎಚ್ಚರಿಕೆ ನೀಡಿದೆ. ಹೊರಗಿನ ವ್ಯಕ್ತಿಗಳು, ಸಂಸ್ಥೆಗಳು ಇಪಿಎಫ್‌ಒದಿಂದ ಮಾನ್ಯತೆ ಪಡೆದವರಲ್ಲ ಎಂದು ಹೇಳಿದೆ.
ಕ್ಲೇಮ್ ಸಲ್ಲಿಸುವಿಕೆ, ಹಣದ ವರ್ಗಾವಣೆ, ಕೆವೈಸಿ ಪರಿಷ್ಕರಣೆ, ದೂರುಗಳನ್ನು ಸಲ್ಲಿಸುವುದು ಸೇರಿದಂತೆ ಇಪಿಎಫ್‌ಒದ ಎಲ್ಲ ಸೇವೆಗಳು ಸದಸ್ಯರಿಗೆ ಉಚಿತವಾಗಿ ಲಭ್ಯವಿವೆ. ಈ ಸೇವೆಗಳನ್ನು ಪಡೆಯಲು ಸದಸ್ಯರು ಹೊರಗಿನ ವ್ಯಕ್ತಿಗಳಿಗೆ ಯಾವುದೇ ಶುಲ್ಕ ಪಾವತಿಸಬಾರದು ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.