ADVERTISEMENT

ಇಪಿಎಫ್‌ಒ: 60ರ ನಂತರ ಹೆಚ್ಚಿನ ಪಿಂಚಣಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 18:12 IST
Last Updated 31 ಮಾರ್ಚ್ 2023, 18:12 IST
   

ಬೆಂಗಳೂರು: ನೌಕರರ ಭವಿಷ್ಯನಿಧಿ ಸಂಘಟನೆಯು (ಇ‍‍‍‍ಪಿಎಫ್‌ಒ) ತನ್ನ ಸದಸ್ಯರಿಗೆ ನೀಡುವ ಪಿಂಚಣಿಯನ್ನು 58 ವರ್ಷ ವಯಸ್ಸು ಪೂರ್ಣಗೊಂಡ ತಕ್ಷಣವೇ ಪಡೆಯಬೇಕು ಎಂದೇನೂ ಇಲ್ಲ. ಬದಲಿಗೆ, ಸದಸ್ಯರು 59 ವರ್ಷ ವಯಸ್ಸು ಪೂರ್ಣಗೊಂಡ ನಂತರದಲ್ಲಿ ಅಥವಾ 60 ವರ್ಷ ಪೂರ್ಣಗೊಂಡ ನಂತರದಲ್ಲಿಯೂ ಅದನ್ನು ಪಡೆಯಬಹುದು.

59 ವರ್ಷ ವಯಸ್ಸು ಪೂರ್ಣಗೊಂಡ ನಂತರದಲ್ಲಿ ಪಿಂಚಣಿ ಪಡೆಯುವವರಿಗೆ ಸಿಗುವ ಮೊತ್ತವು ಮೂಲ ಪಿಂಚಣಿ ಮೊತ್ತಕ್ಕಿಂತ ಶೇಕಡ 4ರಷ್ಟು ಹೆಚ್ಚಿರುತ್ತದೆ.

60 ವರ್ಷ ಪೂರ್ಣಗೊಂಡ ನಂತರ ಪಿಂಚಣಿ ಪಡೆಯಲು ತೀರ್ಮಾನಿಸಿದರೆ ಸಿಗುವ ಮೊತ್ತವು ಮೂಲ ಪಿಂಚಣಿ ಮೊತ್ತಕ್ಕಿಂತ
ಶೇ 8.16ರಷ್ಟು ಹೆಚ್ಚಾಗಿರುತ್ತದೆ.

ADVERTISEMENT

ಈ ವಿಚಾರವಾಗಿ ಇಪಿಎಫ್‌ಒ 2016ರಲ್ಲಿಯೇ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ 2022ರಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿ ಇಪಿಎಫ್‌ಒ ತನ್ನ ಸದಸ್ಯರಿಗೆ ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೇ 3ರವರೆಗೆ ಅವಕಾಶ ಇದೆ.

ಹೆಚ್ಚಿನ ಪಿಂಚಣಿ ಆಯ್ಕೆ ಬಯಸಿ ಅರ್ಜಿ ಸಲ್ಲಿಸುತ್ತಿರುವವರಲ್ಲಿ ಈಗಷ್ಟೇ 58 ವರ್ಷ ವಯಸ್ಸು ಪೂರ್ಣಗೊಂಡವರು ಕೂಡ ಇದ್ದಾರೆ.

2016ರ ಆದೇಶದ ಅನ್ವಯ, 58 ವರ್ಷ ಪೂರ್ಣಗೊಂಡ ಹಾಗೂ ಪಿಂಚಣಿಗೆ ಅರ್ಹವಾಗಿರುವ ಪಿ.ಎಫ್. ಸದಸ್ಯರು ತಮಗೆ ಪಿಂಚಣಿಯು ಒಂದು ವರ್ಷ ಅಥವಾ ಎರಡು ವರ್ಷಗಳ ನಂತರವೇ ಸಿಗಲಿ (ಅಂದರೆ, 59 ವರ್ಷ ವಯಸ್ಸಾದಾಗ) ಎಂದು ಬಯಸಿದರೆ, ಅದಕ್ಕೆ ಸಂಬಂಧಿಸಿದಂತೆ ನಿಗದಿತ ನಮೂನೆಯಲ್ಲಿ ಪಿ.ಎಫ್. ಕಚೇರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

‘ಹಲವು ಕಂಪನಿಗಳಲ್ಲಿ 58 ವರ್ಷಕ್ಕೆ ನೌಕರರು ನಿವೃತ್ತರಾಗುವುದಿಲ್ಲ. 60 ವರ್ಷಕ್ಕೆ ನಿವೃತ್ತರಾಗುವವರು ಪಿಂಚಣಿ ಪಡೆಯುವುದನ್ನು ಎರಡು ವರ್ಷದ ಮಟ್ಟಿಗೆ ಮುಂದೂಡಿ, ತುಸು ಹೆಚ್ಚಿನ ಮೊತ್ತದ ಪಿಂಚಣಿ ಪಡೆಯಲು ಇದು ಅವಕಾಶ ಕಲ್ಪಿಸುತ್ತದೆ’ ಎಂದು ಪಿ.ಎಫ್‌. ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.