ADVERTISEMENT

ಇನ್ನು ಪಿಎಫ್‌ ಖಾತೆ ವರ್ಗಾವಣೆ ಸುಲಭ

ಪಿಟಿಐ
Published 25 ಏಪ್ರಿಲ್ 2025, 15:11 IST
Last Updated 25 ಏಪ್ರಿಲ್ 2025, 15:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಉದ್ಯೋಗಿಯ ಭವಿಷ್ಯ ನಿಧಿ (ಪಿಎಫ್‌) ಖಾತೆ ವರ್ಗಾವಣೆಗೆ ಸಂಬಂಧಿಸಿದ ನಿಯಮಗಳನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಸರಳೀಕರಣಗೊಳಿಸಿದೆ. ಇನ್ನು ಮುಂದೆ ಪಿಎಫ್‌ ಮೊತ್ತದ ವರ್ಗಾವಣೆಯು ಸುಲಭವಾಗಲಿದೆ.

ಉದ್ಯೋಗಿಯು ಕೆಲಸ ಬದಲಿಸಿದ ಸಂದರ್ಭದಲ್ಲಿ ಆತನ ಖಾತೆಯ ವರ್ಗಾವಣೆಗೆ ಹಲವು ಪ್ರಕ್ರಿಯೆಗಳನ್ನು ಪೂರೈಸಬೇಕಿತ್ತು. ಇದಕ್ಕೆ ಉದ್ಯೋಗಿಯು ಕೆಲಸ ಮಾಡಿದ್ದ ಸಂಸ್ಥೆ ಕೂಡ ಅನುಮೋದನೆ ನೀಡಬೇಕಿತ್ತು. ಇದರಿಂದ ಉದ್ಯೋಗಿಯು ಆ ಸಂಸ್ಥೆಗೆ ಎಡತಾಕಬೇಕಿತ್ತು. ಇಪಿಎಫ್‌ಒ ಚಂದಾದಾರರಿಗೆ ಅನುಕೂಲ ಕಲ್ಪಿಸಲು ಈ ನಿಯಮವನ್ನು ಕೈಬಿಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಶುಕ್ರವಾರ ತಿಳಿಸಿದೆ.

ಇಲ್ಲಿಯವರೆಗೆ ಭವಿಷ್ಯ ನಿಧಿ ಮೊತ್ತದ ವರ್ಗಾವಣೆ ಪ್ರಕ್ರಿಯೆಯು ನೌಕರರ ಭವಿಷ್ಯ ನಿಧಿಯ (ಇಪಿಎಫ್‌) ಎರಡು ಕಚೇರಿಗಳ ನಡುವೆ ನಡೆಯುತ್ತಿತ್ತು. ಅಂದರೆ ಉದ್ಯೋಗಿಯು ಕೆಲಸಕ್ಕೆ ಸೇರಿದ ವೇಳೆ ಪಿಎಫ್‌ ಖಾತೆ ತೆರೆದ ಮೂಲ ಕಚೇರಿ ಮತ್ತು ಅಂತಿಮವಾಗಿ ಪಿಎಫ್‌ ಮೊತ್ತ ಜಮೆ ಮಾಡುವ ಕಚೇರಿ ನಡುವೆ ಈ ಪ್ರಕ್ರಿಯೆ ಜರುಗುತ್ತಿತ್ತು ಎಂದು ತಿಳಿಸಿದೆ.

ADVERTISEMENT

ಯಾವುದೇ ಉದ್ಯೋಗಿಯು ಖಾತೆ ವರ್ಗಾವಣೆಗೆ ನಮೂನೆ 13 ಅನ್ನು ಭರ್ತಿ ಮಾಡಿ ಸಲ್ಲಿಸುವುದು ಕಡ್ಡಾಯ. ಪಿಎಫ್‌ ಮೊತ್ತವನ್ನು ಜಮೆ ಮಾಡಬೇಕಿರುವ ಕಚೇರಿಯು ಇದಕ್ಕೆ ಅನುಮೋದನೆ ನೀಡಬೇಕಿತ್ತು. ಸದ್ಯ ಈ ಅರ್ಜಿಯನ್ನು ಪರಿಷ್ಕರಿಸಲಾಗಿದೆ. ಇನ್ನು ಮುಂದೆ ಅರ್ಜಿಗೆ ಈ ಕಚೇರಿಯು ಅನುಮೋದನೆ ನೀಡುವ ಅಗತ್ಯವಿಲ್ಲ. ಇದಕ್ಕಾಗಿ ಹೊಸ ತಂತ್ರಾಂಶವನ್ನು ಅಳವಡಿಸಲಾಗಿದೆ ಎಂದು ವಿವರಿಸಿದೆ.

ಖಾತೆ ವರ್ಗಾವಣೆಗೆ ಮೂಲ ಕಚೇರಿಯಿಂದ ಅನುಮೋದನೆ ಸಿಕ್ಕಿದ ತಕ್ಷಣವೇ ಮೂಲ ಖಾತೆಯ ಮೊತ್ತವು ಉದ್ಯೋಗಿಯ ಹಾಲಿ ಖಾತೆಗೆ ಸ್ವಯಂಚಾಲಿತವಾಗಿ ಜಮೆಯಾಗುತ್ತದೆ. ಇದರಿಂದ ಚಂದಾದಾರರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದೆ.

ಈ ಸರಳೀಕರಣದಿಂದ ಪ್ರತಿ ವರ್ಷ 1.25 ಕೋಟಿ ಇಪಿಎಫ್‌ಒ ಚಂದಾದಾರರಿಗೆ ಅನುಕೂಲವಾಗಲಿದೆ. ₹90 ಸಾವಿರ ಕೋಟಿಗೂ ಹೆಚ್ಚು ಮೊತ್ತವು ತ್ವರಿತಗತಿಯಲ್ಲಿ ಅರ್ಹ ಉದ್ಯೋಗಿಗಳ ಖಾತೆಗೆ ಜಮೆಯಾಗಲಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.