ADVERTISEMENT

ಪಿ.ಎಫ್. ಬಡ್ಡಿ ದರ ಮಾರ್ಚ್‌ನಲ್ಲಿ ನಿರ್ಧಾರ

ಪಿಟಿಐ
Published 13 ಫೆಬ್ರುವರಿ 2022, 10:35 IST
Last Updated 13 ಫೆಬ್ರುವರಿ 2022, 10:35 IST
   

ನವದೆಹಲಿ (ಪಿಟಿಐ): ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಧರ್ಮದರ್ಶಿಗಳ ಮಂಡಳಿಯು (ಸಿಬಿಟಿ) ಪ್ರಸಕ್ತ ಹಣಕಾಸು ವರ್ಷದಲ್ಲಿ (2021–22) ಪಿ.ಎಫ್‌. ನಿಧಿಗೆ ನೀಡಬೇಕಿರುವ ಬಡ್ಡಿ ಪ್ರಮಾಣದ ಬಗ್ಗೆ ಮಾರ್ಚ್‌ನಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ.

‘ಧರ್ಮದರ್ಶಿಗಳ ಮಂಡಳಿಯ ಸಭೆಯು ಮಾರ್ಚ್‌ನಲ್ಲಿ ಗುವಾಹಟಿಯಲ್ಲಿ ನಡೆಯಲಿದೆ. ಬಡ್ಡಿಯ ಬಗ್ಗೆ ಅಲ್ಲಿ ಪ್ರಸ್ತಾವ ಬರಲಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ತಿಳಿಸಿದರು. 2021–22ನೇ ಸಾಲಿಗೆ ಕೂಡ ಶೇಕಡ 8.5ರಷ್ಟು ಬಡ್ಡಿ ನಿಗದಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಯಾದವ್ ಅವರು, ‘ಈ ಹಣಕಾಸು ವರ್ಷದಲ್ಲಿ ಸಂಘಟನೆಗೆ ಎಷ್ಟು ಆದಾಯ ಸಿಗಲಿದೆ ಎಂಬುದನ್ನು ಆಧರಿಸಿ ಬಡ್ಡಿಯ ಪ್ರಮಾಣ ತೀರ್ಮಾನವಾಗುತ್ತದೆ’ ಎಂದರು.

ಯಾದವ್ ಅವರು ಧರ್ಮದರ್ಶಿಗಳ ಮಂಡಳಿಯ ಅಧ್ಯಕ್ಷರೂ ಹೌದು. ಹಿಂದಿನ ಹಣಕಾಸು ವರ್ಷದಲ್ಲಿ (2020–21) ಪಿ.ಎಫ್. ನಿಧಿಗೆ ಶೇ 8.5ರಷ್ಟು ಬಡ್ಡಿ ನೀಡಲಾಗಿತ್ತು.

ADVERTISEMENT

ಧರ್ಮದರ್ಶಿಗಳ ಮಂಡಳಿಯು ಬಡ್ಡಿ ದರ ನಿಗದಿ ಮಾಡಿದ ನಂತರದಲ್ಲಿ, ಆ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಿ, ಸಚಿವಾಲಯದ ಸಹಮತ ಪಡೆಯಲಾಗುತ್ತದೆ. ಹಣಕಾಸು ಸಚಿವಾಲಯವು ಅನುಮೋದನೆ ನೀಡಿದ ನಂತರ ಇಪಿಎಫ್‌ಒ, ಬಡ್ಡಿ ದರಕ್ಕೆ ಅನುಗುಣವಾಗಿ ಮೊತ್ತ ಪಾವತಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.