ADVERTISEMENT

ಈಕ್ವಿಟಿ ಎಂ.ಎಫ್‌: ತೆರಿಗೆ ಲೆಕ್ಕಾಚಾರ ಹೇಗೆ?

ರಾಜೇಶ್ ಕುಮಾರ್ ಟಿ. ಆರ್.
Published 18 ಮಾರ್ಚ್ 2024, 0:30 IST
Last Updated 18 ಮಾರ್ಚ್ 2024, 0:30 IST
ತೆರಿಗೆ ಲೆಕ್ಕಾಚಾರ– ಸಾಂದರ್ಭಿಕ ಚಿತ್ರ
ತೆರಿಗೆ ಲೆಕ್ಕಾಚಾರ– ಸಾಂದರ್ಭಿಕ ಚಿತ್ರ   

ಈಕ್ವಿಟಿ ಮ್ಯೂಚುಯಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ತೆರಿಗೆ ಅಂದಾಜು ಅರಿಯುವುದು ಅತಿಮುಖ್ಯ. ತೆರಿಗೆಯ ಮಾನದಂಡ ಗೊತ್ತಿದ್ದರೆ ಮಾತ್ರ ಇಂತಹ ಹೂಡಿಕೆಗಳಿಂದ ಗರಿಷ್ಠ ಲಾಭ ಪಡೆದುಕೊಳ್ಳಲು ಸಾಧ್ಯ. ಬನ್ನಿ, ಈಕ್ವಿಟಿ ಆಧಾರಿತ ಮ್ಯೂಚುಯಲ್ ಫಂಡ್‌ಗಳಲ್ಲಿ ತೆರಿಗೆ ಲೆಕ್ಕಾಚಾರ ಹೇಗಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣ.

ಹೀಗಿರುತ್ತೆ ತೆರಿಗೆ ಲೆಕ್ಕಾಚಾರ: 

ಷೇರು ಮಾರುಕಟ್ಟೆಯಲ್ಲಿ ಶೇ 65ರಷ್ಟು ಹಣ ಹೂಡಿಕೆ ಮಾಡುವ ಫಂಡ್‌ಗಳನ್ನು ಈಕ್ವಿಟಿ ಆಧಾರಿತ ಎಂದು ಪರಿಗಣಿಸಲಾಗುತ್ತದೆ. ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ತೊಡಗಿಸಿದಾಗ
ಹೂಡಿಕೆದಾರ, ಬಂಡವಾಳದ ಮೇಲಿನ ಗಳಿಕೆ ಅಂದರೆ ಮ್ಯೂಚುಯಲ್ ಫಂಡ್ ಮಾರಾಟದಿಂದ ಲಾಭ ಪಡೆದುಕೊಳ್ಳುತ್ತಾನೆ. ಉದಾಹರಣೆಗೆ ಯಾವುದೋ ಒಂದು ಮ್ಯೂಚುಯಲ್ ಫಂಡ್ ಅನ್ನು ₹20ಕ್ಕೆ ಖರೀದಿಸಲಾಗಿದೆ ಎಂದುಕೊಳ್ಳಿ. ಆ ಮ್ಯೂಚುಯಲ್ ಫಂಡ್ ಅನ್ನು ₹50ಕ್ಕೆ ಮಾರಾಟ ಮಾಡಿದಾಗ ₹30 ಲಾಭ ಬರುತ್ತದೆ. ಈ ₹30 ಅನ್ನು ಬಂಡವಾಳದ ಮೇಲಿನ ಗಳಿಕೆ ಎಂದು ಕರೆಯಲಾಗುತ್ತದೆ. ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಎಷ್ಟು ಕಾಲ ಹೂಡಿಕೆ ಮಾಡಿದ್ದೀರಿ ಎನ್ನುವುದನ್ನು ಆಧಾರವಾಗಿಟ್ಟುಕೊಂಡು ತೆರಿಗೆ ನಿಗದಿ ಮಾಡಲಾಗುತ್ತದೆ. ಈಕ್ವಿಟಿ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ಅಲ್ಪಾವಧಿಯಲ್ಲಿ ನಗದೀಕರಣ ಮಾಡಿಕೊಂಡರೆ ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ (ಎಸ್‌ಟಿಸಿಜಿ) ಅನ್ವಯಿಸುತ್ತದೆ. ದೀರ್ಘಾವಧಿಯಲ್ಲಿ ನಗದೀಕರಣ ಮಾಡಿಕೊಂಡರೆ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆಯು (ಎಲ್‌ಟಿಸಿಜಿ) ಅನ್ವಯಿಸುತ್ತದೆ.

ADVERTISEMENT

ಏನಿದು ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ?:

ಈಕ್ವಿಟಿ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ಒಂದು ವರ್ಷದ ಒಳಗೆ ನಗದೀಕರಣ ಮಾಡಿಕೊಂಡರೆ ಶೇ 15ರಷ್ಟು ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸುತ್ತದೆ. ಉದಾಹರಣೆಗೆ ಹೂಡಿಕೆ ಮೊತ್ತದ ಮೇಲೆ ₹1.20 ಲಕ್ಷ ಗಳಿಕೆಯಾಗಿದ್ದು ಅದನ್ನು ಒಂದು ವರ್ಷದ ಒಳಗೆ ನಗದೀಕರಣ ಮಾಡಿಕೊಂಡರೆ ಶೇ 15ರ ತೆರಿಗೆ ಲೆಕ್ಕಾಚಾರದಲ್ಲಿ ₹1.20 ಲಕ್ಷ ಗಳಿಕೆಗೆ ₹18 ಸಾವಿರ ತೆರಿಗೆ ಪಾವತಿಸಬೇಕಾಗುತ್ತದೆ.

ಏನಿದು ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ?:

ಈಕ್ವಿಟಿ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ನಗದೀಕರಣ ಮಾಡಿಕೊಂಡರೆ ಶೇ 10ರಷ್ಟು ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸುತ್ತದೆ. ಆದರೆ, ಒಂದು ವರ್ಷದಲ್ಲಿ ₹1 ಲಕ್ಷಕ್ಕಿಂತ ಹೆಚ್ಚಿನ ಗಳಿಕೆಗೆ ಮಾತ್ರ ತೆರಿಗೆ ಅನ್ವಯಿಸುತ್ತದೆ. ₹1 ಲಕ್ಷದವರೆಗಿನ ಗಳಿಕೆಗೆ ಯಾವುದೇ ತೆರಿಗೆ ಇರುವುದಿಲ್ಲ.

ಉದಾಹರಣೆಗೆ ಹೂಡಿಕೆ ಮೊತ್ತದ ಮೇಲೆ ₹1.20 ಲಕ್ಷ ಗಳಿಕೆಯಾಗಿದ್ದು, ಅದನ್ನು ಒಂದು ವರ್ಷದ ಬಳಿಕ ನಗದೀಕರಣ  ಮಾಡಿಕೊಂಡರೆ ಮೊದಲ ₹1 ಲಕ್ಷಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ₹20 ಸಾವಿರ ಗಳಿಕೆಗೆ ಮಾತ್ರ ಶೇ 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಈಕ್ವಿಟಿ ಮ್ಯೂಚುಯಲ್ ಫಂಡ್ ಹೂಡಿಕೆ– ತೆರಿಗೆ ಲೆಕ್ಕಾಚಾರ

ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ: ಈಕ್ವಿಟಿ ಮ್ಯೂಚುಯಲ್ ಫಂಡ್ ಮೇಲಿನ ಗಳಿಕೆಯನ್ನು ಹೂಡಿಕೆ ಮಾಡಿದ ಒಂದು ವರ್ಷದ ಒಳಗಾಗಿ ನಗದೀಕರಣ ಮಾಡಿದರೆ ಶೇ 15ರಷ್ಟು ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸುತ್ತದೆ.

ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ: 

ಈಕ್ವಿಟಿ ಮ್ಯೂಚುಯಲ್ ಫಂಡ್ ಮೇಲಿನ ಗಳಿಕೆಯನ್ನು ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ನಗದೀಕರಣ ಮಾಡಿದರೆ ಶೇ 10ರಷ್ಟು ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸುತ್ತದೆ. ಆದರೆ, ₹1 ಲಕ್ಷದ ವರೆಗಿನ ಗಳಿಕೆಗೆ ತೆರಿಗೆ ಇರುವುದಿಲ್ಲ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.