ADVERTISEMENT

ಇಎಸ್‌ಐಸಿ: ಉದ್ಯೋಗ ನಷ್ಟ, ಹೆಚ್ಚುವರಿ ಪರಿಹಾರ

ಪಿಟಿಐ
Published 21 ಆಗಸ್ಟ್ 2020, 17:29 IST
Last Updated 21 ಆಗಸ್ಟ್ 2020, 17:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಪರಿಸ್ಥಿತಿ ನಿಭಾಯಿಸಲು ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, ಮೂರು ತಿಂಗಳುಗಳ ವೇತನದ ಸರಾಸರಿಯಲ್ಲಿ ಶೇಕಡ 50ರಷ್ಟನ್ನು ‘ನಿರುದ್ಯೋಗ ಪರಿಹಾರ’ದ ರೂಪದಲ್ಲಿ ನೀಡಲು ಕಾರ್ಮಿಕರ ರಾಜ್ಯ ವಿಮಾ ನಿಗಮವು ತೀರ್ಮಾನಿಸಿದೆ. ಇದಕ್ಕೆ ಅವಕಾಶ ಆಗುವಂತೆ ನಿಗಮವು ನಿಯಮಗಳನ್ನು ಬದಲಿಸಿದೆ.

ಈ ತೀರ್ಮಾನವು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಅಂದಾಜು 40 ಲಕ್ಷ ಕಾರ್ಮಿಕರ ನೆರವಿಗೆ ಬರುವ ನಿರೀಕ್ಷೆ ಇದೆ. ‘ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ ಯೋಜನೆ’ಯಲ್ಲಿ ನೀಡುವ ಪರಿಹಾರದ ವಿಚಾರದಲ್ಲಿ ನಿಗಮ ಈ ತೀರ್ಮಾನ ಕೈಗೊಂಡಿದೆ. ಇಎಸ್‌ಐ ಯೋಜನೆಯ ವ್ಯಾಪ್ತಿಗೆ ಬರುವ ಕಾರ್ಮಿಕರಿಗೆ ನಿರುದ್ಯೋಗ ಪರಿಹಾರದ ರೂಪದಲ್ಲಿ ಈ ಯೋಜನೆಯ ಅಡಿ ನೆರವು ನೀಡಲಾಗುತ್ತದೆ.

ಈ ಯೋಜನೆಯನ್ನು ಮುಂದಿನ ವರ್ಷದ ಜೂನ್‌ ಅಂತ್ಯದವರೆಗೆ ವಿಸ್ತರಿಸಲು ಕೂಡ ನಿಗಮ ತೀರ್ಮಾನಿಸಿದೆ. ಹೆಚ್ಚುವರಿ ಪರಿಹಾರ ಮೊತ್ತವು ಈ ವರ್ಷದ ಮಾರ್ಚ್‌ 24ರಿಂದ ಡಿಸೆಂಬರ್ 31ರವರೆಗಿನ ಅವಧಿಗೆ ಅನ್ವಯವಾಗುತ್ತದೆ. ಅದಾದ ನಂತರ, ಜೂನ್‌ 30ರವರೆಗೆ ಮೊದಲಿನ ಪರಿಹಾರ ಮೊತ್ತವೇ ಸಿಗಲಿದೆ.

ADVERTISEMENT

ಸಡಿಲಿಕೆ ಕಂಡಿರುವ ನಿಯಮಗಳನ್ನು ಡಿಸೆಂಬರ್ 31ರ ನಂತರ ಮರುಪರಿಶೀಲಿಸಲಾಗುವುದುಎಂದು ನಿಗಮ ತಿಳಿಸಿದೆ. ಇದುವರೆಗೆ, ಸರಾಸರಿ ವೇತನದ ಶೇ 25ರಷ್ಟನ್ನು ಪರಿಹಾರ ರೂಪದಲ್ಲಿ ನೀಡಲಾಗುತ್ತಿತ್ತು. ಉದ್ಯೋಗ ಕಳೆದುಕೊಂಡ 90 ದಿನಗಳ ನಂತರ ಇದನ್ನು ನೀಡುವ ಬದಲು, 30 ದಿನಗಳ ನಂತರ ನೀಡಲಾಗುತ್ತದೆ ಎಂದು ನಿಗಮ ಹೇಳಿದೆ.

ವಿಮೆ ವ್ಯಾಪ್ತಿಗೆ ಒಳಪಡುವ ವ್ಯಕ್ತಿಗಳು ಇಎಸ್‌ಐಸಿ ಶಾಖಾ ಕಚೇರಿಯ ಮೂಲಕ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಹಣದ ಮೊತ್ತವನ್ನು ಅವರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.